

ಮುದ್ದೇಬಿಹಾಳ: ತಾಲೂಕಿನ ಜೈನಾಪೂರ ಕ್ರಾಸ್ ಬಳಿ ನಾಲತವಾಡ ಮುಖ್ಯ ರಸ್ತೆಯಲ್ಲಿ ಸೋಮವಾರ ಕಾರು, ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ 4 ವರ್ಷದ ಬಾಲಕ ಬಸವರಾಜ ಹಣಮಂತ ಮದರಿ ಸಾವನ್ನಪ್ಪಿದ್ದು, ಹಿಂದೆ ಕುಳಿತಿದ್ದ ತಾಯಿ ಜ್ಯೋತಿ ಮದರಿ ಸ್ಥಿತಿ ಗಂಭೀರವಾಗಿದೆ.
ಬೈಕ್ ಸವಾರ ಬಸವರಾಜನ ತಂದೆ ಹಣಮಂತ ಮದರಿ, ಸಹೋದರ ಸಿದ್ದಾರ್ಥ ಗಂಭೀರವಾಗಿ ಗಾಯಗೊಂಡಿದ್ದು ಸಕಾಲಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಹಣಮಂತನು ಕುಟುಂಬ ಸಮೇತ ಬೈಕ್‌ನಲ್ಲಿ ನಾಲತವಾಡ ಪಟ್ಟಣಕ್ಕೆ ಸಂತೆ ಮಾಡಲು ಹೊರಟಿದ್ದಾಗ ಎದುರಿಗೆ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು ಬೈಕ್ ರಸ್ತೆಯಲ್ಲಿ ಬಿದ್ದು ಅದರಲ್ಲಿದ್ದು ನಾಲ್ವರೂ ಎತ್ತೆಂದರತ್ತ ಚಿಮ್ಮಿ ಬಿದ್ದಿದ್ದಾರೆ.
ತಕ್ಷಣ ದಾರಿಹೋಕರು ಎಲ್ಲ ಗಾಯಾಳುಗಳನ್ನು ನಾಲತವಾಡದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಬಸವರಾಜ ಸಾವನ್ನಪ್ಪಿದ್ದನು. ಇನ್ನುಳಿದವರನ್ನು ಅಲ್ಲಿಂದ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ತಂದು ಜ್ಯೋತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.
ಕಾರಿನಲ್ಲಿ ನಾಲ್ವರು ಇದ್ದರು. ಇಬ್ಬರು ಹುಲಗಬಾಳ ತಾಂಡಾದವರಾಗಿದ್ದರೆ ಇನ್ನಿಬ್ಬರು ಮಡಿಕೇಶ್ವರ ತಾಂಡಾದವರಿದ್ದು ಎಲ್ಲರೂ ಮದ್ಯ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.