

ಚಿಕ್ಕೋಡಿ : ತಾಲೂಕಿನ ಖಡಕಲಾಟ ಗ್ರಾಮದ ನಿಪ್ಪಾಣಿ-ಚಿಕ್ಕೋಡಿ ರಸ್ತೆಯ ಲಕ್ಷ್ಮೀ ಮಂದಿರ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಾಜಸ್ಥಾನದ ಫರಸಿ ಆಳವಡಿಸುವ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಹಿಂದೆ ಕುಳಿತಿದ್ದ ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತ ಕಾರ್ಮಿಕನನ್ನು ರಾಜಕುಮಾರ್ ಬಲರಾಮ ವರ್ಮಾ ( 28) ಬಾಲನ್‌ಪುರ್ ರಾಜಸ್ಥಾನದ ನಿವಾಸಿ ಗುರುತಿಸಲಾಗಿದೆ. ವಿಶಾಲ ಪ್ರಕಾಶ ಬಾಟೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ಹನ್ನೆರಡರ ಸುಮಾರಿಗೆ ಅಪಘಾತ ಸಂಭವಿಸಿದೆ. ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ನಜ್ಜುಗುಜ್ಜಾಗಿದೆ.ರಾಜಕುಮಾರ್ ಮತ್ತು ವಿಶಾಲ ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿಯಲ್ಲಿ ಫರಸಿ ಆಳವಡಿಸುವ ಕೆಲಸ ಮಾಡುತ್ತಿದ್ದರು.ಇಬ್ಬರೂ ಬೈಕ್ ನಲ್ಲಿ ಚಿಕ್ಕೋಡಿಗೆ ಬರುತ್ತಿದ್ದರು. ಇದೇ ಖಡಕಲಾಟ ಗ್ರಾಮದ ಲಕ್ಷ್ಮೀ ಮಂದಿರ ತಿರುವಿನಲ್ಲಿ ಖಡಕಲಾಟ ಕಡೆಗೆ ಹೋಗುತ್ತಿದ್ದ ಕಾರು ಎದುರಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಈ ವೇಳೆ ರಾಜಕುಮಾರ ಮತ್ತು ವಿಶಾಲ ಕೆಳಗೆ ಬಿದ್ದಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜಕುಮಾರ್ ಮೃತಪಟ್ಟಿದ್ದಾರೆ. ವಿಶಾಲ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಸಬ್‌ಇನ್ಸ್‌ಪೆಕ್ಟರ್ ಸುಮಲತಾ ಆಸಂಗಿ, ಕಾನ್‌ಸ್ಟೆಬಲ್ ವಿಶಾಲ ಸ್ಥಳ ಪರಿಶೀಲನೆ ನಡೆಸಿದರು. ರಾಜ್‌ಕುಮಾರ್ ಸ್ನೇಹಿತ ಪಾಪಪುರಂ ಫಿತ್ತರಮಲ್ ಬಾಳೈ ಎಂಬವರು ಕಾರು ಚಾಲಕನ ವಿರುದ್ಧ ದೂರು ದಾಖಲಿಸಿದ್ದು, ಸಬ್‌ಇನ್ಸ್‌ಪೆಕ್ಟರ್ ಆಸಂಗಿ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.