

ಉಡುಪಿ: ಪ್ರತಿಯೊಬ್ಬರೂ ಓದಬೇಕಾದ ಸುದ್ದಿ ಇದು. ಮಕ್ಕಳ ಹಠಕ್ಕೆ ಸೋತು ವಾಹನ ಕ್ರೇಜ್ಗೆ ನೀರೆರೆಯುವ ಮುನ್ನ ಜೋಕೆ!
ಬೇಡ ಬೇಡ ಅಂದ್ರೂ ಬೈಕ್ನ ಹುಚ್ಚು ತಲೆಗೆ ಹತ್ತಿಸಿಕೊಂಡ 15ರ ಬಾಲಕ. ಒಮ್ಮೆ ಪೊಲೀಸರಿಗೆ ಸಿಕ್ಕಿಬಿದ್ದು ದಂಡವನ್ನೂ ಕಟ್ಟಿದ್ದ. ಇವನ ತಪ್ಪಿಗೆ ಠಾಣೆ ಮೆಟ್ಟಿಲೇರಿದ್ದ ತಾಯಿಗೂ ಎಚ್ಚರಿಕೆ ಕೊಟ್ಟಿದ್ದ ಪೊಲೀಸರು, ಅಪ್ರಾಪ್ತರಿಗೆ ವಾಹನ ಕೊಡಬೇಡಿ ಎಂದು ತಿಳಿಹೇಳಿ ಕಳುಹಿಸಿದ್ದರು. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಆತ ಇಂದು ಆ ಬೈಕ್ನಿಂದಲೇ ನಡುರಸ್ತೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ. ಆ ಬಾಲಕನ ಹೆಸರು ಅರಾನ್.
ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರು ಬಳಿಯ ಅಳ್ವೆಗದ್ದೆಯಲ್ಲಿ ಇಂದು (ಗುರುವಾರ) ಬೈಕ್ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಅರಾನ್ ಪ್ರಾಣಬಿಟ್ಟಿದ್ದಾನೆ. ರಸ್ತೆ ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ಸವಾರಿ ಮಾಡಲು ಮನೆಯಿಂದ ಹೊರಟ ಈ ಬಾಲಕ, ಅತಿ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಆತ ಮೃತಪಟ್ಟಿದ್ದಾನೆ. ಇದನ್ನೂ ಓದಿರಿ ಎಲ್ಲೆಲ್ಲೋ ಹೋಗಿ ಮೀಟಿಂಗ್ ಮಾಡ್ತೀರಿ, ರೈತ-ಕೂಲಿಕಾರನ ಸಾವಿಗೆ ಬೆಲೆ ಇಲ್ಲವೇ? ಜಿಲ್ಲಾಧಿಕಾರಿಗೆ ತರಾಟೆ
ಮೃತ ಬಾಲಕ ಅರಾನ್ ಹಡವಿನಕೋಣೆ ನಿವಾಸಿ. ವಾಹನ ಚಾಲನೆ ಪರವಾನಗಿ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಈತನಿಗೆ ಕಳೆದ ವಾರವಷ್ಟೆ ಬೈಂದೂರು ಪೊಲೀಸರು ದಂಡ ವಿಧಿಸಿದ್ದರು. ಅಲ್ಲದೆ ಬೈಕ್ ಸೀಜ್ ಮಾಡಿ ಎರಡು ದಿನ ಠಾಣೆಯಲ್ಲೇ ಇಟ್ಟಿದ್ದರು. ಬಾಲಕನ ತಾಯಿಯನ್ನು ಬರಹೇಳಿ ಬುದ್ದಿ ಹೇಳಿ ಕಳುಹಿಸಿದ್ದರು.
ಇಷ್ಟಕ್ಕೆ ಸುಮ್ಮನಾಗದ ಆತ ಗುರುವಾರ ಮುಂಜಾನೆ ಅತಿ ವೇಗದಿಂದ ಬೈಕ್ ಚಲಾಯಿಸುತ್ತಲೇ ಪ್ರಾಣ ಬಿಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂಗೀತಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.