ಬೇಡಿಕೆ ಈಡೇರಿಸುವಂತೆ ನೇಕಾರರಿಂದ ಪ್ರತಿಭಟನೆ

1021021
Published on

ಬೆಳಗಾವಿ: ನೇಕಾರರ ಸೀರೆಗಳನ್ನು ಖರೀದಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ನೇಕಾರರ ವೇದಿಕೆ ನೇತೃತ್ವದಲ್ಲಿ ನೇಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರೊನಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನೇಕಾರರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಶೇ.90 ನೇಕಾರಿಕೆ ಉದ್ಯೋಗ ಸ್ಥಗಿತಗೊಂಡಿದೆ. ಅನೇಕ ಜನರು ಆರ್ಥಿಕ ಸಂಕಷ್ಟದಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರು ನೇಕಾರರ 15 ಲಕ್ಷ ಸೀರೆಗಳನ್ನು ದೀಪಾವಳಿಗೆ ಖರೀದಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಸರ್ಕಾರ ಸೀರೆ ಖರೀದಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ಖಾಸಗೀಕರಣ ಮಾಡುವುದರಿಂದ ನೇಕಾರರಿಗೆ ನೀಡಲಾಗುವ ಪ್ರತಿ ಯೂನಿಟ್‌ಗೆ 1 ರೂ. 50 ಪೈಸೆ ಸಹಾಯಧನ ಸ್ಥಗಿತವಾಗುತ್ತದೆ. ಇದರಿಂದಾಗಿ ಪ್ರತಿ ಸೀರೆಗೆ 20 ರೂ. ಹೊರೆಯಾಗಲಿದೆ. ಹಾಗಾಗಿ ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಬೇಕು. ಜವಳಿ ಇಲಾಖೆಯಿಂದ ನೇಕಾರರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿನ ಕೂಲಿ ನೇಕಾರರನ್ನು ಕಟ್ಟಡ ಕಾರ್ಮಿಕರ ವ್ಯಾಪ್ತಿಗೆ ಸೇರಿಸಬೇಕು. ಬೆಂಗಳೂರಿನಲ್ಲಿರುವ ಜವಳಿ ಅಭಿವೃದ್ಧಿ ನಿಗಮವನ್ನು ಬೆಳಗಾವಿಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆ ಅಧ್ಯಕ್ಷ ಪಾಂಡುರಂಗ ಧೋತ್ರೆ, ಕಾರ್ಯದರ್ಶಿ ಪರಶುರಾಮ ಢಗೆ, ರಮೇಶ ಸೊಂಟಕ್ಕಿ, ಶ್ರೀನಿವಾಸ ತಾಳೂಕರ, ನಾರಾಯಣ ಕಾಮಕರ, ಸಂಜು ಇಟ್ನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net