

ಚಿಕ್ಕಮಗಳೂರು: ಗಣೇಶ ಚತುರ್ಥಿಗೆ ಎರಡು ತಿಂಗಳು ಬಾಕಿ ಇದ್ದರೂ ಮೂರ್ತಿ ತಯಾರಿ ಈಗಿನಿಂದಲೇ ಭರದಿಂದ ಸಾಗುತ್ತದೆ. ಆದರೆ ಈ ವರ್ಷ ಕರೊನಾ ಭಯದಿಂದ ಜನರು ಇನ್ನೂ ಹೊರಬಂದಿಲ್ಲ. ಸಾರ್ವಜನಿಕ ಗಣೇಶೋತ್ಸವದ ಸ್ವರೂಪವೂ ನಿರ್ಧಾರವಾಗಿಲ್ಲ. ಹಾಗಾಗಿ ಮೂರ್ತಿ ತಯಾರಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರತಿ ವರ್ಷವೂ ಮನೆಯಲ್ಲಿ ಗಣಪತಿ ಇಟ್ಟು ಪೂಜೆ ಮಾಡುವವರು ಈ ವರ್ಷವೂ ಮಾಡುತ್ತಾರೆ. ವಿಜೃಂಭಣೆ ತುಸು ಕಡಿಮೆ ಇರಬಹುದು. ಕರೊನಾ ಭಯದಿಂದಾಗಿ ಇವರೂ ಆರ್ಡರ್ ಕೊಟ್ಟಿಲ್ಲ. ಇನ್ನು ಸಂಭ್ರಮದಿಂದ ಜರುಗುವ ಸಾರ್ವಜನಿಕ ಗಣೇಶೋತ್ಸವಕ್ಕೆ ದೊಡ್ಡ ಮೂರ್ತಿಯನ್ನು ತಯಾರಿಸಬೇಕೇ, ಬೇಡವೇ? ಎಂಬ ಗೊಂದಲ ಕಲಾವಿದರನ್ನು ಕಾಡುತ್ತಿದೆ.
ಕರೊನಾದ ನಡುವೆ ಸಾರ್ವಜನಿಕ ಗಣೇಶೋತ್ಸವ ಹೇಗೆ ಆಚರಿಸಬೇಕೆಂಬ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿಲ್ಲ. ಹೀಗಾಗಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿಸುವ ದೊಡ್ಡ ಮೂರ್ತಿಗಳು ಮಾರಾಟವಾಗದಿದ್ದರೆ ಎಂಬ ಭಯ ತಯಾರಕರಲ್ಲಿದೆ. ಮನೆಗಳಲ್ಲಿ ಸಣ್ಣ ಮೂರ್ತಿಗಳನ್ನು ಇಟ್ಟು ಪೂಜೆ ಮಾಡುವವರಿಗೆ ಕರೊನಾದಿಂದ ಯಾವುದೇ ಪರಿಣಾಮ ಬೀರದು.
ಲಾಕ್ಡೌನ್ ಸಡಿಲಿಕೆ ಬಳಿಕ ಮದುವೆ, ಗೃಹಪ್ರವೇಶ, ಮುಂಜಿ ಮತ್ತಿತರೆ ಶುಭ ಸಮಾರಂಭಗಳಿಗೆ ಸರ್ಕಾರ ನಿಯಮಾವಳಿ ರೂಪಿಸಿ ಅವಕಾಶ ನೀಡಿದೆ. ಹಾಗೆಯೇ ಸಾರ್ವಜನಿಕ ಗಣೇಶೋತ್ಸವಕ್ಕೂ ಮಾರ್ಗಸೂಚಿ ಮುಂದೆ ಬರಬಹುದು.
ಆ.21 ಮತ್ತು 22ರಂದು ಗೌರಿ-ಗಣೇಶ ಹಬ್ಬವಿದೆ. ದೊಡ್ಡ ಮೂರ್ತಿಗಳ ತಯಾರಿಕೆಗೆ ಉತ್ಸವ ಸಮಿತಿ ಮುಖಂಡರು ಮೂರು ತಿಂಗಳ ಮುನ್ನವೇ ಆರ್ಡರ್ ಕೊಡುತ್ತಿದ್ದರು.ಆದರೆ ಈವರೆಗೂ ಮೂರ್ತಿಗಳಿಗೆ ಬೇಡಿಕೆ ಬಂದಿಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಮಾರ್ಗಸೂಚಿಯನ್ನು ಬೇಗ ಬಿಡುಗಡೆ ಮಾಡಿದರೆ ಮೂರ್ತಿ ತಯಾರಕರಿಗೆ ಅನುಕೂಲವಾಗಲಿದೆ. ಲಾಕ್ಡೌನ್ನಿಂದ ಕೈಯಲ್ಲಿ ಕಾಸಿಲ್ಲದೆ ಜೀವನ ನಿರ್ವಹಣೆಗೂ ಕಷ್ಟಪಡುತ್ತಿರುವ ಕುಂಬಾರರಿಗೆ ನೆರವಾದಂತಾಗುತ್ತದೆ. ಹಾಗೆಯೇ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುವವರ ಗೊಂದಲಕ್ಕೂ ತೆರೆ ಎಳೆದಂತಾಗುತ್ತದೆ ಎಂಬುದು ಮೂರ್ತಿ ತಯಾರಕರ ಅಭಿಪ್ರಾಯ.
ಕಳೆದ ವರ್ಷ ಚಿಕ್ಕಮಗಳೂರಿನಲ್ಲಿ 100, ಚಿಕ್ಕಮಗಳೂರು ಗ್ರಾಮಾಂತರದಲ್ಲಿ 300, ಜಿಲ್ಲೆಯಲ್ಲಿ 1,700ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ನಡೆಸಲಾಗಿತ್ತು. ಈ ಬಾರಿ ಮಾರ್ಗಸೂಚಿ ಪ್ರಕಟಿಸದಿದ್ದರಿಂದ ಹಬ್ಬ ಆಚರಣೆಗೆ ಯಾವ ಸಮಿತಿಯೂ ನಿರ್ಧಾರ ಕೈಗೊಂಡಿಲ್ಲ.
ದೊಡ್ಡ ಮೂರ್ತಿಗೆ ಹಿಂದೇಟು: ಕುಂಬಾರ ಬೀದಿ, ಶಕ್ತಿನಗರ ಹಲವೆಡೆ ಮೂರ್ತಿ ತಯಾರಕರು ಟ್ರ್ಯಾಕ್ಟರ್ ಲೋಡ್ಗೆ ತಲಾ 8 ಸಾವಿರ ರೂ.ನಂತೆ ಹತ್ತಾರು ಮಣ್ಣು ಖರೀದಿಸಿ ಸಂಗ್ರಹಿಸಿದ್ದಾರೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳ ತಯಾರಿ ಕಾರ್ಯ ಭರದಿಂದ ಸಾಗಿದೆ. ಕುಂಬಾರ ಬೀದಿಯಲ್ಲಿ ಮಹಿಳೆಯರು ಮಕ್ಕಳಾದಿಯಾಗಿ ತಯಾರಕರ ಕುಟುಂಬ ನೂರಾರು ಮಣ್ಣಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಆದರೆ ಸಾರ್ವಜನಿಕ ಗಣೇಶ ಮೂರ್ತಿ ತಯಾರಿಗೆ ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರ ನಿಲುವು ಪ್ರಕಟಿಸಲಿ: ಬಿ.ಎಸ್.ಸಣ್ಣಪ್ಪ, ಪರಮೇಶ್ವರಪ್ಪ, ದೇವರಾಜ್, ಸಿದ್ದೇಶ್, ರೇಣುಕಾ ಅವರ ಕುಟುಂಬಗಳು ಜಿಲ್ಲೆಯ ನೂರಾರು ಸಾರ್ವಜನಿಕ ಗಣೇಶೋತ್ಸವಗಳಿಗೆ ಮೂರ್ತಿ ತಯಾರಿಸುತ್ತಿದ್ದರು. ಕಳೆದ ವರ್ಷ ಮಾಲಿನ್ಯ ನಿಯಂತ್ರಣಕ್ಕಾಗಿ ಮಣ್ಣಿನ ಮೂರ್ತಿಗಳಿಗೆ ರಾಸಾಯನಿಕಯುಕ್ತ ಬಣ್ಣ ಬಳಕೆಗೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ಹೇರಿದ್ದರಿಂದ ತಯಾರಕರಿಗೆ ನಷ್ಟವಾಗಿತ್ತು. ಈಗ ಸಾರ್ವಜನಿಕ ಗಣೇಶೋತ್ಸವ ಕುರಿತು ಸರ್ಕಾರ ಮುಂಚಿತವಾಗಿ ತನ್ನ ನಿಲುವು ಪ್ರಕಟಿಸಿದರೆ ಮುಂದಾಗುವ ನಷ್ಟ ತಡೆಯಬಹುದು ಎಂಬುದು ಮೂರ್ತಿ ತಯಾರಕರ ಅಭಿಪ್ರಾಯ.