ಪುಟ್ಟ ಗಿಡದಲ್ಲಿ ಬೆಳೆದಿದೆ ಗಜ ಗಾತ್ರದ ನಿಂಬೆಹಣ್ಣು!

ಚಿತ್ರ 21ಎಸ್ ಡಿ ಪಿ 02
ಪಾಲಿಬೆಟ್ಟದ ಮೂಕೊಂಡ ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಬೆಳೆದಿರುವ 5 ಕೆ.ಜಿ. ತೂಕದ ಗಜ ನಿಂಬೆಹಣ್ಣುಗಳು.
Published on

ಸಿದ್ದಾಪುರ : ಪಾಲಿಬೆಟ್ಟದ ಕಾಫಿ ತೋಟವೊಂದರಲ್ಲಿ ಬರೋಬ್ಬರಿ 5 ಕೆ.ಜಿ. ತೂಕದ ಗಜ ನಿಂಬೆಹಣ್ಣು ಬೆಳೆದಿದೆ!

ಜಿಲ್ಲಾ ಪಂಚಾಯಿತಿ ಸದಸ್ಯ, ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ‘ಗಜ’ ನಿಂಬೆ ಬೆಳೆದು ಅಚ್ಚರಿ ಮೂಡಿಸಿದೆ. ಮತ್ತೂ ಅಚ್ಚರಿ ಎಂದರೆ ಅಂದಾಜು 6 ಅಡಿ ಎತ್ತರದ ಗಿಡಗಳಲ್ಲಿ ಸಣ್ಣ ಗಾತ್ರದಿಂದ ಹಿಡಿದು 5 ಕೆ.ಜಿ. ತೂಗುವ ನಿಂಬೆ ಹಣ್ಣುಗಳು ಬೆಳೆದಿರುವುದು ವಿಶೇಷ.
ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಮೈಸೂರಿನ ಮಾರುಕಟ್ಟೆಯಿಂದ ನಿಂಬೆಹಣ್ಣು ಖರೀದಿ ಮಾಡಿ ತಂದಿದ್ದರು. ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಎಸೆದಿದ್ದರು. ಕೆಲ ದಿನಗಳಲ್ಲಿ ನಿಂಬೆಹಣ್ಣು ಎಸೆದಿದ್ದ ಜಾಗದಲ್ಲಿ ಎರಡು ಸಸಿಗಳು ಬೆಳೆದಿದ್ದವು. ಸಸಿಗಳನ್ನು ಕಿತ್ತು ತೋಟದ ಬದಿಯಲ್ಲಿ ನೆಟ್ಟು ಸಾವಯವ ಗೊಬ್ಬರ ನೀಡಿ ಪೋಷಣೆ ಮಾಡಿದ್ದರು.

ಗಿಡ ಬೆಳೆಯಿತಾದರೂ ಹಣ್ಣು ಬಿಟ್ಟಿರಲಿಲ್ಲ. ಇತ್ತೀಚೆಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳು ಬಿಟ್ಟವಲ್ಲದೆ, ಸಣ್ಣ ಸಣ್ಣ ಕಾಯಿಗಳು ಕಾಣಿಸಿಕೊಂಡವು. ಕೆಲ ತಿಂಗಳ ನಂತರ ಕಾಯಿಗಳು ದೊಡ್ಡದಾಗುತ್ತ ಭಾರಿ ಗಾತ್ರ ಪಡೆದುಕೊಂಡವು ಎನ್ನುತ್ತಾರೆ ವಿಜು ಸುಬ್ರಮಣಿ.

ಇದನ್ನು ಗಜ ನಿಂಬೆಹಣ್ಣು ಎಂದು ಹೇಳಲಾಗುತ್ತಿದ್ದು ಇಟಲಿ, ಯೂರೋಪ್ ದೇಶಗಳಲ್ಲಿ ಕಂಡುಬರುವ ತಳಿಯಾಗಿದೆ. ಗಜನಿಂಬೆ ಎಲ್ಲ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರದಲ್ಲಿದ್ದು, ಸಣ್ಣ ಬೀಜಗಳನ್ನು ಹೊಂದಿದೆ. ಹಣ್ಣುಗಳಲ್ಲಿ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಗೆ ಬಳಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net