

ಹಾವೇರಿ: ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣಾ ಕಾವು ಜೋರಾಗಿದೆ. ಗೃಹ ಸಚಿವ ಅಮಿತ್ ಷಾ ಅವರು ಆಗಮನ ನಡುವೆಯೇ ಹಾವೇರಿಯಲ್ಲಿ ಬಿಜೆಪಿ ನಾಯಕರಿಗೆ ಬಿಗ್ ಶಾಕ್ ಎದುರಾಗಿದ್ದು, ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿಯಲು ಬಿಜೆಪಿ ರೆಬಲ್ ನಾಯಕ ಮುಂದಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಬಿಜೆಪಿ ಮಾಜಿ ಶಾಸಕ ನೆಹರು ಓಲೇಕಾರ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಯಾದಗಿರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕ ನೆಹರು ಓಲೇಕಾರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಶಾಲು ಹಾಕಿ, ಕಾಂಗ್ರೆಸ್ ಧ್ವಜ ಕೊಟ್ಟು ಸ್ವಾಗತಿಸಿದರು.
65 ವರ್ಷ ವಯಸ್ಸಿನ ನೆಹರು ಓಲೇಕಾರ ಪರಿಶಿಷ್ಟ ಜಾತಿ ಸಮುದಾಯದವರು. ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.