

ವಿಜಯಪುರ : ಅಹಲೆ ಸುನ್ನತ್ ಜಮಾತ್ ನೇತೃತ್ವದಲ್ಲಿ ಪ್ರವಾದಿ ಹಜರತ್ ಮಹಮದ್ ಪೈಗಂಬರ್ ಅವರ ಜಯಂತ್ಯುತ್ಸವ (ಈದ್ ಮಿಲಾದ್) ಅಂಗವಾಗಿ ಅ.9ರಂದು ಬೃಹತ್ ಶಾಂತಿ ಯಾತ್ರೆಯನ್ನು ವಿಜಯಪುರ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ ಹಾಗೂಇಸ್ಲಾಂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರಪೀರಾ ಹಾಶ್ಮೀ ಹೇಳಿದರು.
ಶಾಂತಿ, ಸಮಾನತೆ, ಮಾನವೀಯತೆಯ ಪ್ರತೀಕವಾಗಿರುವ ಹಜರತ್ ಪ್ರವಾದಿ ಮಹಮದ್ ಪೈಗಂಬರ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಅವರ ಜಯಂತ್ಯುತ್ಸವವನ್ನು ಅವರ ಆಶಯಗಳಂತೆ ಆಚರಿಸುವುದು ನಮ್ಮ ಕರ್ತವ್ಯ. ಅಂದು ಉಚಿತ ನೇತ್ರ ತಪಾಸಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಸಂಘಟಿಸಿ, ಸಂಗ್ರಹವಾಗಿರುವ ರಕ್ತವನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ ಮಾಡಲಾಗಿದೆ ಎಂದರು.
ಅ.9 ರಂದು ಬೃಹತ್ ಶಾಂತಿಯಾತ್ರೆ ನಡೆಯಲಿದ್ದು, ಪ್ರಮುಖ ಮಾರ್ಗಗಳಲ್ಲಿ ಈ ಶಾಂತಿಯಾತ್ರೆ ಸಂಚರಿಸಲಿದೆ. ಹಲವಾರು ಸಮಾಜದ ಮುಖಂಡರು, ಮಠಾಧೀಶರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖಂಡರಾದ ಮೊಹ್ಮದ್‌ರಫೀಕ್ ಟಪಾಲ್, ಶಕೀಲ್ ಸುತಾರ, ಎಸ್.ಎಸ್. ಖಾದ್ರಿಇನಾಮದಾರ, ಯಾಜ್ ಕಲಾದಗಿ ಇತರರು ಉಪಸ್ಥಿತರಿದ್ದರು.