ಚುನಾವಣಾ ಪ್ರಚಾರಕ್ಕೆ ಸಿದ್ದರಾದ ದೊಡ್ಡ ಗೌಡ್ರು!

HDD
Published on

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ನಾನು ಕೂಡ ಪ್ರಚಾರಕ್ಕೆ ಹೋಗುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ತಮ್ಮ ಪತ್ನಿ ಜತೆ ಗುರುವಾರ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ನಮ್ಮ ಪಕ್ಷದ ನಾಯಕರೆಲ್ಲರೂ ‘ಪಂಚರತ್ನ’ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಪಂಚರತ್ನ’ ಯಾತ್ರೆ ಸಾಗುತ್ತಿರುವ ಪ್ರತಿ ಹಳ್ಳಿಗಳಲ್ಲೂ ನಮ್ಮ ಪಕ್ಷದ ಶಾಸಕರು, ಮುಖಂಡರು, ಮಾಜಿ ಶಾಸಕರು ಒಂದೊಂದು ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಮನೆ ಮನೆ ತೆರಳಿ ಪಕ್ಷದ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಶಾಶ್ವತ ಅಲ್ಲ. ಪ್ರತಿ ದಿನ ಪಟ್ಟಿ ಬದಲಾವಣೆ ಆಗುತ್ತದೆ. ಪ್ರತಿ ದಿನ ಸಮೀಕ್ಷೆಯೂ ನಡೆಯುತ್ತಿದೆ. ಅದನ್ನು ಆಧರಿಸಿ ನಿರ್ಧಾರ ಆಗುತ್ತದೆ. ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಶಿವಲಿಂಗೇಗೌಡರು ಕುಮಾರಸ್ವಾಮಿ ಜೊತೆ ಮಾತನಾಡಿದ್ದಾರೆ. ದ್ವಂದ ಇದೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ಪ್ರತಿಕ್ರಿಯಿಸಿದರು.
ಹಾಸನದಲ್ಲಿ ಶಾಸಕ ಪ್ರೀತಂ ಗೌಡನಿಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರವಿದ್ದಾಗ ಸರ್ವ ಶಕ್ತಿ ಕೊಟ್ಟಿದೆ. ಯಾವ್ಯಾವ ಕೆಲಸ ಕೊಟ್ಟಿದ್ದಾರೆ? ಅದರಿಂದ ಎಷ್ಟು ಹಣ ಸಂಪಾದಿಸಿದ್ದಾರೆ? ಅವರ ಶಕ್ತಿಗೆ ಯಡಿಯೂರಪ್ಪ ಹಾಗೂ ಅವರ ಮಕ್ಕಳೇ ಕಾರಣ. ಅವರಾರ ಹೆದರಿಕೆಗೂ ನಾವು ಬಗ್ಗುವುದಿಲ್ಲ ಎಂದು ಗುಡುಗಿದರು.

ಹಾಸನ ಟಿಕೆಟ್‌ಗೆ ಪಕ್ಷದಲ್ಲಿ ಬಹಳ ಮಂದಿ ಆಕಾಂಕ್ಷಿಗಳಿದ್ದಾರೆ. ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net