

ಬೆಂಗಳೂರು: ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತ ಸಮುದಾಯದವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಳೆದ ಕೆಲವು ದಿನಗಳಿಂದ ಧರಣಿ ನಡೆಸುತ್ತಿರುವ ನಡುವೆಯೇ ಈಗ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಬೃಹತ್ ಸಮಾವೇಶಕ್ಕೆ ಮುಂದಾಗಿದೆ.
ರಾಜ್ಯದ ಒಕ್ಕಲಿಗ ಸ್ವಾಮಿಜೀಗಳ ನೇತೃತ್ವದ ನಡೆಯಲಿರುವ ಈ ಸಮಾವೇಶದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಕೂಡ ಭಾಗವಹಿಸಲಿದ್ದು, ಒಕ್ಕಲಿಗ ಸಮುದಾಯದ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ಅಂದಾಜಿದೆ. ಬೆಂಗಳೂರು ಉತ್ತರ ತಾಲೂಕು ನಗರೂರು ಗ್ರಾಮದ ಬಿಜಿಎಸ್ ವರ್ಲ್ಡ್ ಶಾಲಾ ಆವರಣದಲ್ಲಿ ಈ ಸಮಾವೇಶ ನಡೆಯಲಿದೆ.
ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಸಮಾವೇಶದ ಪೂರ್ವಸಿದ್ಧತೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ತುಮಕೂರು ಮತ್ತು ರಾಮನಗರ ಜಿಲ್ಲೆಗಳ ಒಕ್ಕಲಿಗ ಸಮುದಾಯದ ಸಹಕಾರದಲ್ಲಿ ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಒಕ್ಕಲಿಗರ ಬೇರೆ ಬೇರೆ ಉಪಜಾತಿಗಳನ್ನು ಸೇರಿಸಿ ಶೇ. 4ರಷ್ಟು ಮೀಸಲಾತಿಯನ್ನು ಹೆಚ್ಚಿಸಲು ಆಗ್ರಹಿಸುವ ಸಲುವಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ತಿಳಿಸಿದೆ. ನೆಲಮಂಗಲದ ಖಾಸಗಿ ಹೋಟೆಲೊಂದರಲ್ಲಿ ಪೂರ್ವಸಿದ್ಧತಾ ಸಭೆ ನಡೆದಿದ್ದು, ಒಕ್ಕಲಿಗ ಸಮುದಾಯದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ