

ಮೈಸೂರು: ಹುಲಿ, ಚಿರತೆ ಸಂಖ್ಯೆಗಳ ಹೆಚ್ಚಳವೂ ಅನೇಕ ಸವಾಲು ಸೃಷ್ಟಿಸಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಕೆ. ಮಾಳಖೇಡೆ ಹೇಳಿದರು.
ವಿಶ್ವ ಹುಲಿ ದಿನದ ಅಂಗವಾಗಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ‘ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಪರಿಣಾಮ ಕ್ರಮಗಳು’ ಕುರಿತು ಸೋಮವಾರ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅನೇಕ ಕಾರಣದಿಂದ ಅವಸಾನದಂಚಿಗೆ ದೂಡಲ್ಪಟ್ಟಿದ್ದ ಹುಲಿ ಸಂತತಿ ಕೆಲ ವರ್ಷಗಳಿಂದ ಸುಧಾರಿಸುತ್ತಿದೆ. ಅದರಲ್ಲೂ ಕಳೆದ 4-5 ಗಣತಿ ವೇಳೆ ಹುಲಿಗಳ ಸಂಖ್ಯೆ ಏರಿಕೆಯಾಗಿದ್ದು, ಹುಲಿ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಇದೀಗ ಸವಾಲಾಗಿ ಪರಿಣಮಿಸುತ್ತಿದೆ. ದೊಡ್ಡ ಬೆಕ್ಕುಗಳ ಪಟ್ಟಿಯಲ್ಲಿ ಹುಲಿಯೊಂದಿಗೆ ಚಿರತೆಯೂ ಸೇರಿದ್ದು, ಚಿರತೆಗಳು ಎಲ್ಲೆಡೆ ಕಂಡು ಬರುತ್ತಿವೆ. ಹುಲಿ, ಚಿರತೆ ಸಂಖ್ಯೆಗಳ ಹೆಚ್ಚಳವೂ ಸವಾಲಾಗಿದೆ.
ಕೆಲವೆಡೆ ದೊಡ್ಡಬೆಕ್ಕುಗಳ ಸಂಖ್ಯೆ ಹೆಚ್ಚಳದಿಂದಾಗಿ ಮಾನವ-ಪ್ರಾಣಿ ಸಂಘರ್ಷ ಉಂಟಾಗುತ್ತಿದೆ ಎಂಬ ದೂರು ವ್ಯಕ್ತವಾಗುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು, ಕೋಲಾರ ಮತ್ತು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಕಂಡುಬಂದಿದೆ ಎಂದರು.
ಮೈಸೂರು ನಗರದ ಹೊರವಲಯದಲ್ಲಿ 3-4 ಹುಲಿಗಳು ಸಂಚಾರ ಕಂಡು ಬಂದಿದೆ. ಆ ಹುಲಿಗಳ ಚಲನವಲನ ಗುರುತಿಸಲಾಗಿದೆ. ಅವುಗಳ ಮೇಲೆ ನಿಗಾ ಇಟ್ಟು ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಸೆರೆ ಹಿಡಿದ ಚಿರತೆಯನ್ನು ಅರಣ್ಯದಲ್ಲಿ ಬಿಡುಗಡೆ ಮಾಡುವುದರಿಂದಲೂ ಕೆಲ ಸಮಸ್ಯೆ ಸೃಷ್ಟಿಯಾಗುತ್ತಿದೆ. ಆದ್ದರಿಂದ ರಕ್ಷಿಸಲ್ಪಟ್ಟ ಪ್ರಾಣಿಗಳ ಸ್ಥಳಾಂತರ, ರಕ್ಷಣಾ ಕಾರ್ಯದಲ್ಲಿ ಅನುಸರಿಸಬೇಕಾದ ಕ್ರಮ ಕುರಿತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11ರಲ್ಲಿ ಮಾಡಬೇಕಾದ ತಿದ್ದುಪಡಿ ಅಥವಾ ಸೇರಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿಜ್ಞಾನಿ ಡಾ.ಖಮರ್ ಖುರೇಷಿ ಮಾತನಾಡಿ, ದೊಡ್ಡ ಬೆಕ್ಕುಗಳು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸಿದಂತೆ ವನ್ಯಜೀವಿಗಳ ಕಾರಿಡಾರ್‌ಗಳ ಸಂರಕ್ಷಣೆಯ ಬಗ್ಗೆಯೂ ಗಮನ ನೀಡಬೇಕಿದೆ ಎಂದರು.
ದೊಡ್ಡಬೆಕ್ಕು ಸೇರಿದಂತೆ ವನ್ಯಜೀವಿಗಳಿಗೆ ಕಾರಿಡಾರ್ ಸುಸ್ಥಿರವಾಗಿದ್ದರೆ ಅವುಗಳಿಗೆ ರಕ್ಷಣೆ ಕಲ್ಪಿಸಬಹುದು. ಅನೇಕ ಕಾರಣದಿಂದ ಕಾರಿಡಾರ್‌ಗಳಿಗೆ ಅಡಚಣೆ ಉಂಟಾಗಿರುವುದರಿಂದ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.
ದೊಡ್ಡಬೆಕ್ಕು ಪಟ್ಟಿಗೆ ಸೇರುವ ಪ್ರಾಣಿಗಳ ಸಂಖ್ಯೆ ವೃದ್ಧಿಯಾದರೆ ಅರಣ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ಯಾವ ರೀತಿ ಪ್ರಯೋಜನವಾಗುತ್ತದೆ ಎಂಬದನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈ ಹಿಂದೆ ಆಗಿರುವ ಬೆಳವಣಿಗೆಗಳು ವನ್ಯಜೀವಿ ಸಂರಕ್ಷಣೆಗೆ ಪೂರಕವಾಗಿದೆ. ಒಣಗಿದ್ದ ಕಾಡು, ಒಣಗಿದ್ದ ಹುಲ್ಲುಗಾವಲುಗಳು ದೊಡ್ಡಬೆಕ್ಕಿನ ಗುಂಪಿನ ಪ್ರಾಣಿಗಳಿಂದಾಗಿ ಮರುಜೀವ ಪಡೆದುಕೊಂಡಿದೆ ಎಂದು ತಿಳಿಸಿದರು.
ದೇಶದಲ್ಲಿ ಹುಲಿ ಸಂರಕ್ಷಣೆ ಕುರಿತಂತೆ ಎಲ್ಲರೂ ಮಾತನಾಡುತ್ತೇವೆ. 2011 ರಿಂದ 2024 ರವರೆಗಿನ ಹುಲಿಗಳ ಅಂಕಿ ಅಂಶವನ್ನು ಗಮನಿಸುವುದಾದರೆ ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗಿರುವುದು ಸಂತೋಷದ ಸಂಗತಿ. ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹುಲಿ ಗಣತಿ ಪ್ರಕ್ರಿಯೆ ಕರಾರುವಾಕ್ ಆಗಿಯೂ, ಪಾರದರ್ಶಕವಾಗಿ ಕಡಿಮೆ ಸಮಯದಲ್ಲಿ ಪೂರ್ಣಗೊಳ್ಳುತ್ತಿದೆ. ಇದರಿಂದ ಹುಲಿಗಳ ಸಂಖ್ಯೆ ನಿಖರವಾಗಿ ತಿಳಿಯುತ್ತಿದೆ ಎಂದು ಹೇಳಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಸುನಿಲ್ ಪನ್ವಾರ್, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಸೇರಿದಂತೆ ರಾಜ್ಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರು, ಪಶುವೈದ್ಯರು ಪಾಲ್ಗೊಂಡಿದ್ದರು.