ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ತರಬೇತಿ; ಎಂಎಸ್‌ಎಂಇ ಸಮಾವೇಶದಲ್ಲಿ ಎಂ.ಬಿ.ಪಾಟೀಲ್ ಭರವಸೆ

msme
Published on

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡಗಳ ಉದ್ಯಮಿಗಳಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ಈ ಸಂಬಂಧ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ ತರಭೇತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಕರ್ನಾಟಕ ದಲಿತ ಉದ್ಯಮಿಗಳ ಸಂಘಟನೆ (ಕೆಇಡಿಎ) ಏರ್ಪಡಿಸಿದ್ದ ಬೃಹತ್ ಪ.ಜಾತಿ ವರ್ಗಗಳ ಎಂಎಸ್‌ಎಂಇ ಸಮಾವೇಶದಲ್ಲಿ ಮಾತನಾಡಿದರು.

ಉದ್ಯಮ ಕ್ಷೇತ್ರದಲ್ಲಿ ಪ.ಜಾತಿ,ವರ್ಗಗಳ ಉದ್ಯಮಶೀಲರ ಬೆಳವಣಿಗೆಗೆ ಸರಕಾರದ ಒತ್ತಾಸೆಯಾಗಿದೆ. ಆರ್ಥಿಕ, ಮೂಲಸೌಕರ್ಯ, ಸ್ಟಾರ್ಟಪ್ ಹಾಗೂ ಎಂಎಸ್‌ಎಂಇ ಗಳಿಗೆ ನಿಯಂತ್ರಕ ವ್ಯವಸ್ಥೆ ಇತ್ಯಾದಿ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ, ಕೆಎಸ್‌ಎಫ್ ಸಿ, ಕೆಯುಎಂ, ಜಿಲ್ಲಾ ಕೈಗಾರಿಕಾ ಕೇಂದ್ರಗಳು ಉದ್ಯಮಿಗಳ ಅಹವಾಲುಗಳನ್ನು ನಿಯಮಿತವಾಗಿ ಆಲಿಸುತ್ತಿವೆ.

ಕೆಐಎಡಿಬಿ ಪ್ಲಾಟ್ ಹಾಗೂ ಕೆಎಸ್‌ಎಸ್‌ಐಡಿಸಿ ಷೆಡ್‌ಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ,ವರ್ಗದ ಉದ್ಯಮಿಗಳಿಗೆ ಶೇ 24.1ರಷ್ಟು ಮೀಸಲು, ಭೂಮಿ ಮಂಜೂರಾತಿಯಲ್ಲಿ ಶೇ 75ರಷ್ಟು ಸಬ್ಸಿಡಿ, ಕೆಎಸ್‌ಎಫ್‌ಸಿಯಿಂದ ರೂ 10 ಕೋಟಿಯವರೆಗೆ ಶೇ 4ರಷ್ಟು ಬಡ್ಡಿ ದರದಲ್ಲಿ ಸಾಲ ನೆರವು, ಮಾರ್ಜಿನ್ ಮನಿಯ ಶೇ 50ರಷ್ಟು ಬೀಜಧನದ ನೆರವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.

ಕಳೆದ 15 ತಿಂಗಳ ಅವಧಿಯಲ್ಲಿ ಸರ್ಕಾರವು ಪರಿಶಿಷ್ಟ ಜಾತಿಯ 121 ಉದ್ಯಮಿಗಳಿಗೆ 130 ಎಕರೆ ಹಾಗೂ ಪರಿಶಿಷ್ಟ ವರ್ಗದ 39 ಉದ್ಯಮಿಗಳಿಗೆ 42 ಎಕರೆ ಭೂಮಿ ಮಂಜೂರು ಮಾಡಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ, ಕೋಲಾರ ಸಂಸದ ಮಲ್ಲೇಶ ಬಾಬು, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಸಿ.ಜಿ.ಶ್ರೀನಿವಾಸನ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net