ಬೀಡಿ, ಸಿಗರೇಟ್, ತಂಬಾಕು ಮಾರಾಟ ನಿಷೇಧ

images
Published on

ತುಮಕೂರು: ಬೀಡಿ, ಸಿಗರೇಟ್, ತಂಬಾಕು, ಪಾನ್‌ಮಸಾಲ, ಜರ್ದಾಪ್ರಿಯರಿಗೂ ಕರೊನಾ ಆಘಾತ ನೀಡಿದೆ. ಜಗತ್ತಿನೆಲ್ಲ್ಲೆಡೆ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಪಾನ್‌ಮಸಾಲ, ಜರ್ದಾ, ಚೈನಿ ಇತ್ಯಾದಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಸುವುದಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜತೆಗೆ ಕರೊನಾ, ಕ್ಷಯರೋಗ, ನ್ಯುಮೋನಿಯಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇದರ ನಿಯಂತ್ರಣಕ್ಕಾಗಿ ಮುಂದಿನ ಆದೇಶದವರೆಗೂ ಮುಂಜಾಗ್ರತಾ ಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿ ಮೂಲಕ ವೈರಾಣುಗಳು ದೇಹ ಪ್ರವೇಶಿಸಿ ದೇಹದ ಇತರ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ಗಮನದಲ್ಲಿಟ್ಟುಕೊಂಡು ತಂಬಾಕು ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

ಶಿಸ್ತುಕ್ರಮ: ಜಿಲ್ಲಾಡಳಿತ ಹೊರಡಿಸಿರುವ ಆದೇಶ ಉಲ್ಲಂಘಿಸಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ವಿಪತ್ತು ನಿರ್ವಹಣಾ ಕಾಯ್ದೆ 2005 ಐಪಿಸಿ ಕಲಂ 188, 268, 269 ಹಾಗೂ 270 ಸಿಆರ್‌ಪಿಸಿ ಅಡಿಯಲ್ಲಿ ಕಾಯ್ದೆ ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಿ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ರಾಕೇಶ್ ಕುಮಾರ್ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ವಿಮೆ ಸೌಲಭ್ಯಕ್ಕೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ಆರೋಗ್ಯ ವಿಮೆ ಸೌಲಭ್ಯ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಎಐಟಿಯುಸಿ ನೋಂದಾಯಿತ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಫೆಡರೇಷನ್ ಒತ್ತಾಯಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಮನಗರ ಜಿಲ್ಲೆಯಲ್ಲಿ ಮಾಸಿಕ ತಲಾ 3 ಸಾವಿರ ರೂ. ಪ್ರೋತ್ಸಾಹಧನ ನೀಡುತ್ತಿದ್ದು, ರಾಜ್ಯದ ಹಾಲು ಒಕ್ಕೂಟದ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರಿಗೂ ಮಾಸಿಕ 3 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವಂತೆ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಹಾಗೂ ಕಾರ್ಯದರ್ಶಿ ಎನ್.ಶಿವಣ್ಣ ಆಗ್ರಹಿಸಿದ್ದಾರೆ.

ರಾತ್ರಿ ಕಾವಲು ವೈಫಲ್ಯ: ಕರೊನಾ ತಡೆಗೆ ಶಿರಾ ನಗರ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಾಕಿದ್ದ ಕಾವಲು ದಳಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ರಾತ್ರಿ ನಗರ, ಗ್ರಾಮಾಂತರಕ್ಕೆ ಓಡಾಟ ಸಲೀಸಾಗಿರುವುದು ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಬೈಕ್‌ಗಳಲ್ಲಿ ಬರುವವರು ಅಡ್ಡದಾರಿ ಹಿಡಿದು ಬರುತ್ತಿದ್ದು, ರಸ್ತೆಗೆ ಅಡ್ಡಲಾಗಿ ಇಟ್ಟಿರುವ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಬರುವುದು, ಪೊಲೀಸರನ್ನು ಯಾಮಾರಿಸಿ ಅನ್ಯಮಾರ್ಗಗಳನ್ನೇ ಸೃಷ್ಟಿಸಿಕೊಂಡು ಓಡಾಡುವುದು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net