ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧದ ಎಫ್​ಐಆರ್ ರದ್ದು ಕೋರಿ ಅರ್ಜಿ

High Court vvani
Published on

ಬೆಂಗಳೂರು: ದೇಶದ್ರೋಹದ ಆರೋಪದಡಿ ಬೀದರ್​ನ ಶಾಹಿನ್ ಶಿಕ್ಷಣ ಸಂಸ್ಥೆ ವಿರುದ್ಧ ದಾಖಲಿಸಿರುವ ಎಫ್​ಐಆರ್ ರದ್ದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ಅನ್ನು ಏಕಸದಸ್ಯ ಪೀಠಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ವರ್ಗಾಯಿಸಿದೆ.

ಎಫ್​ಐಆರ್ ಮತ್ತದರ ಸಂಬಂಧ ಬೀದರ್​ನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಬಾಬು, ಮೊಹಮದ್ ಬರ್ಕತ್ ಅಲಿ ಮತ್ತಿತರರು ಸಲ್ಲಿಸಿರುವ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು. ಆದರೆ, ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರರ ಪರ ವಕೀಲರು ಹಾಜರಿರಲಿಲ್ಲ.

ಅರ್ಜಿಯಲ್ಲಿನ ಮನವಿ ಗಮನಿಸಿದ ಪೀಠ, ಎಫ್​ಐಆರ್ ರದ್ದುಪಡಿಸಬೇಕು ಹಾಗೂ ಪ್ರಕರಣದ ವಿಚಾರಣೆ ಕೈಬಿಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಈ ಮನವಿಗಳಿಗೆ ಪಿಐಎಲ್ ಅಡಿ ಪರಿಹಾರ ಸಾಧ್ಯವಿಲ್ಲ, ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿ ಆದೇಶ ನೀಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿಯನ್ನು ಏಕಸದಸ್ಯ ಪೀಠಕ್ಕೆ ವರ್ಗಾಯಿಸಿತು.

ಪ್ರಕರಣದ ವಿಚಾರಣೆ ಹೆಸರಲ್ಲಿ ಶಾಲಾ ಮಕ್ಕಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ಅದಕ್ಕೆ ಯಾವ ಪರಿಹಾರ ಬೇಕೆಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಕೇಳಿಲ್ಲ. ಹೀಗಿದ್ದರೂ, ಈ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಅದಕ್ಕೆ, ಅರ್ಜಿಯನ್ನು ಏಕಸದಸ್ಯ ಪೀಠಕ್ಕೆ ವರ್ಗಾಯಿಸಿ ಹೊರಡಿಸಿರುವ ಈ ಆದೇಶ ಅಡ್ಡಿಯಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net