

ಶಿವಮೊಗ್ಗ: ತಾಲೂಕಿನ ಬಿದರೆ ಗ್ರಾಮದ ಮನೆಗೆ ಕನ್ನ ಹಾಕಿದ್ದ ಕಳ್ಳನನ್ನು ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಾದ 24 ಗಂಟೆಯಲ್ಲೇ ಪತ್ತೆ ಮಾಡಿ ಬಂಧಿಸಿದ್ದಾರೆ. 40 ಸಾವಿರ ರೂ. ಮೌಲ್ಯದ ಚಿನ್ನಾಭರಣ, 2,800 ರೂ. ನಗದು ಮತ್ತು 2,500 ರೂ. ಮೌಲ್ಯದ ಸ್ಮಾರ್ಟ್ ವಾಚ್ ಜಪ್ತಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಳ್ಳಿಯ ತಾಲೂಕಿನ ಹರಳಹಳ್ಳಿಯ ಪುನೀತ್ (19) ಬಂಧಿತ ಆರೋಪಿ. ಈತ ಬಿದರೆ ಗ್ರಾಮದ ಪ್ರದೀಪ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಪ್ರದೀಪ್ ಅವರು ಜ.17ರಂದು ಬೆಳಗ್ಗೆ ಮನೆ ಬಾಗಿಲಿಗೆ ಬೀಗ ಹಾಕಿ ಭದ್ರಾವತಿಗೆ ತೆರಳಿದ್ದು ಶುಕ್ರವಾರ(ಜ.27) ವಾಪಸ್ಸಾಗಿದ್ದರು. ಈ ವೇಳೆ ಅಡುಗೆ ಕೋಣೆಯ ಬಾಗಿಲಿಗೆ ಹಾಕಿದ್ದ ಚಿಲಕ ಮುರಿದು ಒಳ ನುಗ್ಗಿದ್ದ ಕಳ್ಳ, ಬೀರುವಿನಲ್ಲಿದ್ದ 10 ಗ್ರಾಂ ಬಂಗಾರದ ಸರ, ನಾಲ್ಕು ಸಾವಿರ ರೂ. ನಗದು ಮತ್ತು ಸ್ಮಾರ್ಟ್ ವಾಚ್ ಕಳವು ಮಾಡಿದ್ದ. ಈ ಬಗ್ಗೆ ಪ್ರದೀಪ್ ಅವರು ಶನಿವಾರ ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಶಿವಮೊಗ್ಗ ಉಪ ವಿಭಾಗ-ಬಿ ಡಿವೈಎಸ್ಪಿ ಎಂ.ಸುರೇಶ್ ಅವರ ಮೇಲ್ವಿಚಾರಣೆಯಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಭಯ್ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಪಿಎಸ್‌ಐ ರಮೇಶ್ ಮತ್ತು ಸಿಬ್ಬಂದಿಗಳಾದ ಗೀತಾ, ಚಿನ್ನ ನಾಯ್ಕ್, ಶಿವರಾಜ್ ನಾಯ್ಕ್ ಮತ್ತು ಆಂಜನೇಯ ಮಾದರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಭಾನುವಾರ ಆರೋಪಿಯನ್ನು ಬಂಧಿಸಿದೆ.
ಬಂಧಿತನಿಂದ 8 ಗ್ರಾಂ ಬಂಗಾರದ ಸರ, 2,800 ನಗದು ಮತ್ತು ಸ್ಮಾರ್ಟ್ ವಾಚ್ ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿತರನ್ನು ಪತ್ತೆ ಹಚ್ಚಿದ ತನಿಖಾ ತಂಡದ ಉತ್ತಮ ಕಾರ್ಯಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅಭಿನಂದಿಸಿದ್ದಾರೆ.