ಗ್ರಾಮಸ್ಥರಿಂದ ವ್ಯಾಪಕ ವಿರೋಧ ಧರಣಿ

ಹುಮನಾಬಾದ್​ ನಗರಸಭೆ ಎದುರು ಬುಧವಾರ ಸಿಂಧನಕೇರಾ ಗ್ರಾಮಸ್ಥರಿಂದ ನಡೆದ ಧರಣಿ ಸ್ಥಳಕ್ಕೆ  ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರಮುಖರಾದ ಯುವರಾಜ್​ ಐಹೋಳೆ, ಭೀಮರಡ್ಡಿ ಕಳಿಮನಿ, ಶೇಕ್​ ಫೀದೋರ್ಸ್​, ವಿಜಯಕುಮಾರ ಬೊಳೆಗೈ ಇತರರಿದ್ದರು.
ಹುಮನಾಬಾದ್​ ನಗರಸಭೆ ಎದುರು ಬುಧವಾರ ಸಿಂಧನಕೇರಾ ಗ್ರಾಮಸ್ಥರಿಂದ ನಡೆದ ಧರಣಿ ಸ್ಥಳಕ್ಕೆ ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರಮುಖರಾದ ಯುವರಾಜ್​ ಐಹೋಳೆ, ಭೀಮರಡ್ಡಿ ಕಳಿಮನಿ, ಶೇಕ್​ ಫೀದೋರ್ಸ್​, ವಿಜಯಕುಮಾರ ಬೊಳೆಗೈ ಇತರರಿದ್ದರು.
Published on: 

ಹುಮನಾಬಾದ್​: ಪಟ್ಟಣದಲ್ಲಿ ಸಂಗ್ರಹವಾಗುವ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಬುಧವಾರ ಬೆಳಗ್ಗೆಯಿಂದ ನಗರಸಭೆ ಕಚೇರಿ ಎದುರು ಧರಣಿ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಧರಣಿ ಸ್ಥಳದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಗ್ರಾಮಸ್ಥರಾದ ಯುವರಾಜ ಐಹೋಳೆ, ಭೀಮರಡ್ಡಿ ಕಳಿಮನಿ ಹಾಗೂ ಶೇಕ್​ ಫೀದೋರ್ಸ್​, ವಿಜಯಕುಮಾರ ಬೊಳೆಗೈ ಸೇರಿ ಹಲವಾರು ಪ್ರಮುಖರು ಮಾತನಾಡಿ, ನಗರಸಭೆಯಿಂದ ಸಂಗ್ರಹಿಸಲಾಗುವ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ ಸುರಿಯುತ್ತಿರುವುದರಿಂದ ಗ್ರಾಮಸ್ಥರಿಗೆ ದುರ್ವಾಸನೆ, ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ದುಫ್ಪಿರಿಣಾಮ ಉಂಟಾಗುವ ಆತಂಕ ಎದುರಾಗಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶೀಘ್ರವೇ ಸಂಬಂಧಿತ ಅಧಿಕಾರಿಗಳು ನಗರಸಭೆಯ ಕಸ ಹಾಗೂ ಘನತ್ಯಾಜ್ಯವನ್ನು ಸಿಂಧನಕೇರಾದಲ್ಲಿ ಸುರಿಯುವುದನ್ನು ತಕ್ಷಣ ನಿಲ್ಲಿಸಬೇಕು. ತ್ಯಾಜ್ಯ ಸುರಿಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಸರ ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಅಪಾಯಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಲಿಖಿತ ಭರವಸೆ ನೀಡಬೇಕೆಂದು ಒತ್ತಾಯಿಸಿದರು.

ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹರಿಸುವ ಕುರಿತು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಪುರಸಭೆ ಮುಖ್ಯಾಧಿಕಾರಿ ವನೀತಾ, ಡಿವೈಎಸ್​ ಪಿ ಮಡೋಳಪ್ಪ, ಪ್ರಮುಖರಾದ ಅನಿಲ್​ ದೊಡ್ಡಿ, ಗುರುಪಾಟೀಲ, ಶೇಕ್​ ಮಕಸೂದ್​, ವಿಜಯಕುಮಾರ್​, ಮಂಜುನಾಥ, ಗಣಪತಿ ಅಷ್ಟೂರೆ, ಶಂಕರ ಚೀಲವಂತ, ಮುಕೇಶ್​ ಪಾಂಡೆ, ಪ್ರವಿಣ ಹೊಂಬಾಳೆ, ಶಿವಲಿಂಗ್​, ಮೈನೋದ್ದೀನ್​, ಅಮನ, ಅಮರ ಸಿಂಧನಕೆರಾ, ನವೀನ್​, ರವಿಕಾಂತ್​, ವಿಜಯಕುಮಾರ ಕಾಡುವಾದಿ, ಸಂತೋಷ, ವಿಶ್ವನಾಥ್​ ಪಾಟೀಲ್​ಇತರರಿದ್ದರು.