ಸಮಾಜಕ್ಕೆ ದುಡಿದವರ ಹೆಸರು ಅಜರಾಮರ

ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಶನಿವಾರ ಆಯೋಜಿಸಿದ್ದ  ಸುಶೀಲಾದೇವಿ ಬಿ.ಪಟೇಲ್‌ರ ೧೨ನೇ ಪುಣ್ಯಸ್ಮರಣೆ ನಿಮಿತ್ತ ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ್ ಅವರಿಗೆ ಕಾಯಕ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಕುಪೇಂದ್ರ ಪಾಟೀಲ್, ಮಾಲತಿ ಎವಲೆ, ಜಗನ್ನಾಥ ಪಾಟೀಲ್, ಗುರುನಾಥ ಗಡ್ಡೆ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಮಲ್ಲಮ್ಮ ಪಾಟೀಲ, ಗೌತಮ ಶಿಂಧೆ, ಕೆಜಿ ಶರಣಪ್ಪ ಗದಲೇಗಾಂವ ಇದ್ದರು.
ಬಸವಕಲ್ಯಾಣದ ಅನುಭವ ಮಂಟಪ ಪರಿಸರದಲ್ಲಿ ಶನಿವಾರ ಆಯೋಜಿಸಿದ್ದ ಸುಶೀಲಾದೇವಿ ಬಿ.ಪಟೇಲ್‌ರ ೧೨ನೇ ಪುಣ್ಯಸ್ಮರಣೆ ನಿಮಿತ್ತ ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ್ ಅವರಿಗೆ ಕಾಯಕ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಕುಪೇಂದ್ರ ಪಾಟೀಲ್, ಮಾಲತಿ ಎವಲೆ, ಜಗನ್ನಾಥ ಪಾಟೀಲ್, ಗುರುನಾಥ ಗಡ್ಡೆ, ಪ್ರೊ.ವಿಜಯಲಕ್ಷ್ಮೀ ಗಡ್ಡೆ, ಮಲ್ಲಮ್ಮ ಪಾಟೀಲ, ಗೌತಮ ಶಿಂಧೆ, ಕೆಜಿ ಶರಣಪ್ಪ ಗದಲೇಗಾಂವ ಇದ್ದರು.
Published on
ಬಸವಕಲ್ಯಾಣ: ಆಸ್ತಿ, ಐಶ್ವರ್ಯ, ಸಂಪತ್ತು ಬಹಳ ಜನರಲ್ಲಿದೆ. ಇದರಿಂದ ಹೆಸರು ಉಳಿಯದು. ದುಡಿಮೆಯಲ್ಲಿ ೧೦ರಷ್ಟು ಸಮಾಜಕ್ಕೆ ಸಮರ್ಪಿಸಬೇಕು. ಸಮಾಜಕ್ಕಾಗಿ ದುಡಿದವರ ಹೆಸರು ಸದಾ ಅಜರಾಮರವಾಗಿ ಉಳಿಯುತ್ತದೆ ಎಂದು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಅನುಭವ ಮಂಟಪ ಪರಿಸರದಲ್ಲಿ ಸುಶೀಲಾದೇವಿ ಬಿ.ಪಟೇಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಸಹಯೋಗದಡಿ ಶನಿವಾರ ಆಯೋಜಿಸಿದ್ದ ಸುಶೀಲಾದೇವಿ ಬಿ.ಪಟೇಲ್ ಅವರ ೧೨ನೇ ಪುಣ್ಯಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ತಮ್ಮ ಆಸ್ತಿ, ಸಂಪತ್ತು ಅನುಭವ ಮಂಟಪಕ್ಕೆ ಸಮರ್ಪಿಸಿದ ಪಟೇಲ್ ದಂಪತಿ ಕಾರ್ಯ ಹಾಗೂ ಕೊಡುಗೆ ಸದಾ ಸ್ಮರಣೀಯ, ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಅನುಭವ ಮಂಟಪಕ್ಕೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅನುದಾನ ನೀಡಿ, ಭೂಮಿ ಪೂಜೆ ನೆರವೇರಿಸಿದರು. ಈಗಿನ ಸರ್ಕಾರವು ಅನುದಾನ ನೀಡಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಬಿ.ವಿ.ಪಟೇಲ್ ಅವರು ಅಂದು ಖರೀದಿ ಮಾಡಿದ ಸ್ಥಳದಲ್ಲಿ ಅನುಭವ ಮಂಟಪ ನಿರ್ಮಾಣವಾಗುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ತಮ್ಮ ಸಂಪೂರ್ಣ ಆಸ್ತಿಯನ್ನು ಅನುಭವ ಮಂಟಪಕ್ಕಾಗಿ ಸಮರ್ಪಿಸಿ ತಮ್ಮ ಜೀವನವನ್ನು ಬಸವ ತತ್ವಕ್ಕಾಗಿ ಮುಡಿಪಾಗಿಟ್ಟಿದ್ದ ಪಟೇಲ್ ದಂಪತಿ ಸೇವೆ ದೊಡ್ಡದು, ಅವರ ಹೆಸರಿನ ಟ್ರಸ್ಟ್ ನಿಂದ ಇಲ್ಲಿ ನಡೆಯುತ್ತಿರುವ ಕಾರ್ಯ ಅವರ ಆತ್ಮಕ್ಕೆ ಶಾಂತಿ ನೀಡಲಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಪ್ರೊ.ಅಶೋಕಕುಮರ ಶ್ರೀವಾಸ್ತವ ಮಾತನಾಡಿ, ಅಗರ್ಭ ಶ್ರೀಮಂತಿಕೆ ಇದ್ದರೂ ಎಳ್ಳಷ್ಟು ಅಹಂಕಾರವಿಲ್ಲದ ಸರಳ ವ್ಯಕ್ತಿತ್ವದ ಡಾ.ಬಿ.ಪಟೇಲ್ ತಮ್ಮ ಜೀವನದಲ್ಲಿ ಗಳಿಸಿದ ಎಲ್ಲವನ್ನು ಕಲ್ಯಾಣ ಮತ್ತು ಅನುಭವ ಮಂಟಪದ ಕಾರ್ಯಕ್ಕೆ ಸಮರ್ಪಿಸಿದ ಮಹಾಚೇತನ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ಬಿಡಿಪಿಸಿ ನಿರ್ದೇಶಕಿ ಪ್ರೊ.ವಿಜಯಲಕ್ಷ್ಮೀ ಗಡ್ಡೆ ಮಾತನಾಡಿದರು. ರಾಯಚೂರಿನ ಉದ್ಯಮಿ ರಮೇಶ ಅಜಗರಣಿ ಮಾತನಾಡಿದರು. ಸುಶೀಲಾದೇವಿ ಬಿ.ಪಟೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ, ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಡಾ.ಎಸ್.ಬಿ.ದುರ್ಗೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಲತಿ ಬಿ.ಎವಳೆ, ಪ್ರಮುಖರಾದ ಕರುಣಾ ಖೇಣಿ, ಪೂಜ್ಯ ಹಾಲಮ್ಮ ತಾಯಿ ಇದ್ದರು. ಶಿಕ್ಷಕ ವಿಜಯಕುಮಾರ ಜೋಜನಾಳ ನಿರೂಪಣೆ ಮಾಡಿದರು. ಸುಧಾಕರ ಕುನಾಳೆ, ಕಲ್ಯಾಣರಾವ ಮದರಗಾಂವ ಹಾಗೂ ವಿಜಯಶ್ರೀ ವಚನ ಗಾಯನ ನಡೆಸಿಕೊಟ್ಟರು.
ಸಾಧಕರಿಗೆ ಪ್ರಶಸ್ತಿ: ಬಾಲವಿವಾಹ ತಡೆಯುವ ಅಭಿಯಾನಕ್ಕಾಗಿ ಕೇಂದ್ರ ಸಚಿವರ ಪ್ರಶಂಸಾ ಪತ್ರ ಪಡೆದಿರುವ ಸಿಡಿಪಿಒ ಗೌತಮ ಶಿಂಧೆ, ಅಂಗವಿಕಲ ಮಕ್ಕಳ ವಿಶೇಷ ಆರೈಕೆಗೆ ಪ್ರಶಂಸಾ ಪತ್ರ ಪಡೆದಿರುವ ಕೆ.ಜಿ.ಶರಣಪ್ಪ ಗದ್ಲೇಗಾಂವ, ಭೂದಾಖಲೆಗಳ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಜೀವಕುಮಾರ ಅಣವೀರ ಗೋಟೂರ್ ಅವರಿಗೆ ಕಾಯಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶೇಷ ಸನ್ಮಾನ: ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ ಪಡೆದಿರುವ ಪ್ರೊ.ವಿಜಯಲಕ್ಷ್ಮೀ ಗಡ್ಡೆ ಹಾಗೂ ದಂಪತಿಗಳಿಗೆ ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.
ಅಟ್ಟೂರ್‌ಗೆ ಕಾಯಕ ಸೇವಾ ರತ್ನ ರಾಜ್ಯ ಪ್ರಶಸ್ತಿ: ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಆರೋಗ್ಯ ಸಮಸ್ಯೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಪೂಜ್ಯರು ಅವರ ನಿವಾಸಕ್ಕೆ ತೆರಳಿ ಡಾ.ಬಿ.ವಿ.ಪಟೇಲ್ ಕಾಯಕ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿ ಗೌರವಿಸಿದರು.
"

ಬಸವ ತತ್ವ, ಅನುಭವ ಮಂಟಪದ ತತ್ವ ಸಂದೇಶಗಳನ್ನು ನಾಡಿಗೆ ಪರಿಚರಿಸುವ ಕಾರ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಾಡಿನಲ್ಲಿ ಯಶಸ್ವಿಯಾಗಿ ನಡೆದಿದೆ. ಲಿಂಗಾಯತ ಧರ್ಮಕ್ಕೆ ಸ್ವಾತಂತ್ರ ಧರ್ಮದ ಮಾನ್ಯತೆ ಸಿಗಲಿದೆ.

| ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹುಲಸೂರು

"

ಅನುಭವ ಮಂಟಪಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ ಡಾ.ಬಿ.ವಿ.ಪಟೇಲ ಅವರದ್ದು ಅಪರೂಪದ ವ್ಯಕ್ತಿತ್ವ. ತಮ್ಮ ಜೀವನದಲ್ಲಿ ಸಂಪಾದಿಸಿದ ಎಲ್ಲವೂ ಅನುಭವ ಮಂಟಪಕ್ಕೆ ಸಮರ್ಪಿಸಿದ ಮಹಾನುಭಾವರು. ತಮ್ಮ ಜೀವನದ ಕೊನೆಯ ಘಳಿಗೆಯ ಅರೆಪ್ರಜ್ಞಾ ಅವಸ್ಥೆಯಲ್ಲಿಯೂ ಅವರಾಡಿದ ಮಾತು ಸಹ ಕಲ್ಯಾಣವೇ ಆಗಿತ್ತು. ಅವರ ಕನಸು ಪಟ್ಟದ್ದೇವರು ನನಸು ಮಾಡುತ್ತಿದ್ದಾರೆ.

| ಕುಪೇಂದ್ರ ಪಾಟೀಲ್ ಅಧ್ಯಕ್ಷ, ಸುಶೀಲಾದೇವಿ ಬಿ.ಪಟೇಲ್ ಚಾರಿಟೇಬಲ್ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net