

ಬಸವಕಲ್ಯಾಣ: ರಾಜ್ಯದ ಕಾರ್ಮಿಕ ವರ್ಗದ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಒತ್ತಾಯಿಸಿ ಸಿಐಟಿಯು ಸಂಘಟನೆಯಿಂದ ನಗರದಲ್ಲಿ ಮಂಗಳವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ತ್ರಿಪುರಾಂತ ಐಬಿಯಿಂದ ಶಾಸಕರ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಾಸಕ ಶರಣು ಸಲಗರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ಲಾಂಟೇಷನ್, ಗಾರ್ಮೆಂಟ್ಸ್, ಹಮಾಲಿ ಕಾರ್ಮಿಕರನ್ನು ಹೊಸ ಕನಿಷ್ಠ ವೇತನ ಅಧಿಸೂಚನೆಯಲ್ಲಿ ಸೇರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಸ್ಕೀಂ ನೌಕರರ ಕಾಯಂ ಮತ್ತು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು. ಬಿಸಿಯೂಟದವರಿಗೆ 7 ಸಾವಿರ ರೂ., ಆಶಾದವರಗೆ 10 ಸಾವಿರ ರೂ., ಅಂಗನವಾಡಿ ನೌಕರರಿಗೆ 15 ಸಾವಿರ ರೂ.ಬಾಕಿ ನೀಡಿ, ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ರದ್ದು ಮಾಡಿ ಕಾಯಂಗೊಳಿಸುವುದು ಸೇರಿ ಇತರ ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು. ಮನವಿ ಪತ್ರ ಸ್ವೀಕರಿಸಿದ ಶಾಸಕ ಶರಣರು ಸಲಗರ, ತಮ್ಮ ಬೇಡಿಕೆ ಇತ್ಯರ್ಥಗೊಳಿಸುವ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಸಕಾರದ ಗಮನಕ್ಕೆ ತರುವದಾಗಿ ಭರವಸೆ ನೀಡಿದರು. ಸಿಐಟಿಯು ಜಿಲ್ಲಾಧ್ಯಕ್ಷ ಶ್ರೀದೇವಿ ಚಿವಡೆ, ಅಂಗವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಜಯಶ್ರೀ ಮೆಂಡೋಳೆ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಾ ಮಜಗೆ, ರತ್ನಮ್ಮ ಘಾಳೆ, ತನುಜಾ ಸ್ವಾಮಿ ಇತರರಿದ್ದರು.