

ಔರಾದ್: ಪಟ್ಟಣಕ್ಕೆ ನೀರು ಪೂರೈಸುವ ಹಾಲಹಳ್ಳಿ ಬ್ಯಾರೇಜ್ನಲ್ಲಿ ನೀರು ಬರಿದಾದ ಕಾರಣ ಹಲವು ದಿನಗಳಿಂದ ಸಮರ್ಪಕವಾಗಿ ನಲ್ಲಿ ನೀರು ಪೂರೈಕೆಯಾಗದೆ ಸಾರ್ವಜನಿಕರು ಜೀವಜಲಕ್ಕಾಗಿ ಪರದಾಡುವಂತಾಗಿದೆ.
ಈ ವರ್ಷ ಮಳೆ ಕೊರತೆಯಿಂದ ನೀರಿನ ಸಮಸ್ಯೆ ತಲೆದೋರಿದೆ. ನಿತ್ಯ ಪಟ್ಟಣಕ್ಕೆ ಎರಡು ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ನೀರಿನ ಸಮಸ್ಯೆ ಬಗೆಹರಿಸಲು ತಾಲೂಕು ಆಡಳಿತ ಹರಸಾಹಸ ಪಡುತ್ತಿದೆ. ವಿಜಯದಶಮಿ ಹಬ್ಬದಿಂದ ಹಿಡಿದು ದೀಪಾವಳಿ ಹಬ್ಬ ಮುಗಿಯುತ್ತಾ ಬಂದರೂ ಕೂಡ ಪಟ್ಟಣದಲ್ಲಿ ನೀರಿನ ಬವಣೆ ತಪ್ಪಿಲ್ಲ.
ಪಟ್ಟಣದ ಒಟ್ಟು 20 ವಾರ್ಡ್ಗಳಲ್ಲಿ ಕೇವಲ 06 ವಾರ್ಡ್ಗಳಲ್ಲಿ ಮಾತ್ರ ನೀರು ಬರುತ್ತಿದ್ದರೆ ಇನ್ನುಳಿದ ವಾರ್ಡ್ಗಳಲ್ಲಿ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ಮಕ್ಕಳು ಟ್ಯಾಂಕರ್ ನೀರಿಗಾಗಿ ತಮ್ಮ ದಿನ ನಿತ್ಯದ ಕೆಲಸ ಮತ್ತು ಶಾಲಾ ಕಾಲೇಜು ತೊರೆದು ಸರದಿ ಸಾಲಿನಲ್ಲಿ ನಿಂತು ಪರಿತಪಿಸುತ್ತಿದ್ದಾರೆ.
ಪಟ್ಟಣದಲ್ಲಿ ಶಾಶ್ವತ ನೀರು ಪೂರೈಕೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಪಂ ಅಧಿಕಾರಿಗಳ ರ್ನಿಲಕ್ಷ್ಯತನ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ಸಮಸ್ಯೆ ತಂದು ತುರ್ತು ಕ್ರಮಕ್ಕೆ ಒತ್ತಾಯಿಸಲಾಗಿದೆ.
ಇತ್ತೀಚಿಗೆ ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳ ಸಭೆ ನಡೆಸಿ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರೂ ಸಹ ಅದು ಇಲ್ಲಿಯವರೆಗೆ ಪ್ರಯೋಜನೆಯಾಗಿಲ್ಲ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಗಮನಹರಿಸಿ ನೀರಿನ ಸಮಸ್ಯೆಯಿಂದ ಮುಕ್ತಿ ದೊರಕಿಸಿ ಕೊಡಬೇಕು ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.