

ಔರಾದ್: ವಸತಿ ಶಾಲೆಗಳಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ತಂಗಿರುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತಮ ರೀತಿ ಮೂಲಸೌಕರ್ಯ ಒದಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ಸೂಚಿಸಿದರು.
ತಾಲೂಕಿನ ಬಲ್ಲೂರ(ಜೆ) ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿ, ಮಕ್ಕಳೊಂದಿಗೆ ಊಟ ಮಾಡಿ ಸಮಸ್ಯೆಆಲಿಸಿದರು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ದಿನನಿತ್ಯದ ಬಳಕೆಗೆ ಶುದ್ಧ ಕುಡಿಯುವ ನೀರು, ನಿಗದಿತ ಸಮಯಕ್ಕೆ ಪೌಷ್ಠಿಕ ಆಹಾರ ಹಾಗೂ ಶೌಚಗೃಹ ಸ್ವಚ್ಛತೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಲೂರ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿಟಿ ಕಾಮಗಾರಿ ಹಾಗೂ ಕೌಠಾ (ಕೆ) ಗ್ರಾಮದಲ್ಲಿ ನಡೆಯುತ್ತಿರುವ ತಿರುಗಾಲುವೆ ಕಾಮಗಾರಿ ಸ್ಥಳಗಳಿಗೆ ಗ ಭೇಟಿ ನೀಡಿ, ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನಿರಂತರವಾಗಿ ಕೆಲಸ ಒದಗಿಸಲಾಗುವುದು. ಕಾರ್ಮಿಕರು ಉದ್ಯೋಗ ಅರಸಿ ಬೇರೆ ಊರುಗಳಿಗೆ ಗುಳೆ ಹೋಗಬಾರದು ಎಂದು ತಿಳಿಸಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಕಾರ್ಮಿಕರಿಗೆ ಬೇಡಿಕೆಗೆ ಅನುಗುಣವಾಗಿ ನಿರಂತರ ಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು. ಯಾರೂ ಉದ್ಯೋಗಕ್ಕಾಗಿ ಗುಳೆ ಹೋಗುವ ಅವಶ್ಯಕತೆ ಇಲ್ಲ. ಸ್ಥಳಿಯವಾಗಿಯೇ ಉದ್ಯೋಗ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಕೌಠಾ (ಬಿ) ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿ, ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಗ್ರಾಮಗಳಲ್ಲಿನ ತೆರೆದ ಬಾವಿ, ಕೊಳವೆಬಾವಿ, ಕೆರೆ ಸೇರಿ ವಿವಿಧ ನೀರಿನ ಮೂಲಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಎಇಇ ಮಾರುತಿ ರಾಠೋಡ್, ಎಡಿ ಉತ್ತಮ, ತುಕಾರಾಮ, ಪಿಡಿಒಗಳಾದ ಅಮರ ಬಿರಾದಾರ, ನಾಗೇಶ ಮುಕ್ರಂಬೆ, ತಾಪಂ ಟಿಸಿ ಆನಂದ ಕಾಳಗಾಪುರೆ, ಟಿಎ ಸಂದೀಪ, ಶರಣಪ್ಪ, ಪರಮೇಶ್ವರ, ಟಿಐಇಸಿ ಅಂಬಾದಾಸ ಪಾಟೀಲ್ ಇತರರಿದ್ದರು.