ಭಾಲ್ಕಿಯ ಬಿಕೆಐಟಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಡೆದ ಡಾ.ಚನ್ನಬಸವ ಪಟ್ಟದ್ದೇವರ ೧೩೬ನೇ ಜಯಂತ್ಯುತ್ಸವ ಸಮಾರಂಭವನ್ನು ಪೂಜ್ಯರು ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬೆಲ್ದಾಳ ಸಿದ್ಧರಾಮ ಶರಣರು, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯರು, ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಸಚಿವ ಈಶ್ವರ ಖಂಡ್ರೆ, ಸಂಸದ ಸಾಗರ ಖಂಡ್ರೆ, ಅಂಕುಶ ಢೋಲೆ ಇತರರಿದ್ದರು.
ಭಾಲ್ಕಿ: ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಜೀವಪರ, ಸಮಾಜಪರ ಕಾರ್ಯಗಳಿಗೆ ಮಠಾಧೀಶರಿಗೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ(ಬಿಕೆಐಟಿ) ಆವರಣದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದ್ದೇವರ ೧೩೬ನೆಯ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟದ್ದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಲ್ಲಿ ಸಲ್ಲಿಸಿದ ಸೇವೆ ಅನುಪಮ ಎಂದರು.
ಶ್ರೀ ಪಟ್ಟದ್ದೇವರು, ಡಾ.ಭೀಮಣ್ಣ ಖಂಡ್ರೆ ಸೇರಿ ಕಲ್ಲು ಮಣ್ಣು ಹೊತ್ತು ಮರೆಯಾಗಿದ್ದ ಅನುಭವ ಮಂಟಪವನ್ನು ಪುನರ್ನಿರ್ಮಾಣ ಮಾಡಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಡಿ ಮಹಿಳಾ ಶಾಲಾ-ಕಾಲೇಜು ತೆರೆದು ಎಲ್ಲ ಮಹಿಳೆಯರಿಗೂ ಶಿಕ್ಷಣ ಸಿಗುವಂತೆ ಮಾಡಿದ್ದರು. ನಂತರ ಶಿಕ್ಷಣ ಸಂಸ್ಥೆ ಜವಾಬ್ದಾರಿ ವಹಿಸಿದ ಡಾ.ಭೀಮಣ್ಣ ಖಂಡ್ರೆ ಅವರು ೧೯೮೨ರಲ್ಲಿ ಗ್ರಾಮೀಣ ಭಾಗದಲ್ಲಿ ಎಂಜನೀಯರಿಂಗ್ ಕಾಲೇಜು ತೆರೆದು ಈ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸು ನನಸು ಮಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರ ಎಲ್ಲ ಕಾರ್ಯಗಳಿಗೆ ಡಾ.ಭೀಮಣ್ಣ ಖಂಡ್ರೆ ಅವರು ಬಲಗೈಯಾಗಿ ಕೆಲಸ ಮಾಡಿದ್ದರು. ಅನುಭವ ಮಂಟಪ ಪುನರ್ನಿರ್ಮಾಣ, ಶಿಕ್ಷಣ, ಕನ್ನಡ ಸೇವೆ ಸೇರಿ ಮುಂತಾದ ವಿಧಾಯಕ ಕಾರ್ಯಗಳಲ್ಲಿ ಈ ಇಬ್ಬರ ಕೊಡುಗೆ ದೊಡ್ಡದಿದೆ. ಬಸವಣ್ಣನವರ ಎಲ್ಲ ಕಾರ್ಯಗಳು ಡಾ.ಚನ್ನಬಸವ ಪಟ್ಟದ್ದೇವರು ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಡಿ ತೆರೆದ ಎಲ್ಲ ಶಾಲಾ-ಕಾಲೇಜುಗಳಿಗೆ ಬಸವಾದಿ ಶರಣರ ಹೆಸರಿಟ್ಟು ಮಹಾತ್ಮರ ಕೊಡುಗೆ ಸಾರಿದ್ದರು ಎಂದು ತಿಳಿಸಿದರು.
ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಅರಣ್ಯ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಈಶ್ವರ ಖಂಡ್ರೆ ಮುಂದೆ ಮುಖ್ಯಮಂತ್ರಿ ಆಗಲಿ ಎಂದು ಹಾರೈಸಿದರು.
ಮೇಹಕರ್-ತಡೋಳಾ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ, ಹಿರೇಮಠ ಸಂಸ್ಥಾನ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬೆಲ್ದಾಳ ಸಿದ್ಧರಾಮ ಶರಣರು, ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಡಾಕುಳಗಿ ಪೂಜ್ಯರು ಮಾತನಾಡಿದರು.
ಸಂಸದ ಸಾಗರ್ ಖಂಡ್ರೆ, ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ, ಬಿಕೆಐಟಿ ಪ್ರಾಚಾರ್ಯ ಡಾ.ಉದಯಕುಮಾರ ಕಲ್ಯಾಣೆ ಇತರರಿದ್ದರು. ಮೇಘನಾ ವಚನ ಗಾಯನ ನಡೆಸಿ ಕೊಟ್ಟರು. ಬಸವರಾಜ ಕಾವಡಿ ನಿರೂಪಣೆ ಮಾಡಿದರು.