ಬಿರಾದಾರಗೆ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ

ಬೆಂಗಳೂರಿನಲ್ಲಿ ನ.14ರಂದು ಪ್ರಶಸ್ತಿ ಪ್ರದಾನ
bidar
ಮಲ್ಲಿಕಾರ್ಜುನ ಬಿರಾದಾರ
Published on: 

ಬೀದರ್: ರಾಜ್ಯ ಸರ್ಕಾರದಿಂದ ಕೊಡಲಾಗುವ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ.ಬೆಂಗಳೂರಿನಲ್ಲಿ ಶುಕ್ರವಾರ (ನ.14) ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಸಹಕಾರ ಕ್ಷೇತ್ರಕ್ಕೆ ನೀಡಿದ ನಾಲ್ಕು ದಶಕಗಳ ಗಣನೀಯ ಕೊಡುಗೆಗಾಗಿ ಬಿರಾದಾರ ಅವರಿಗೆ ಪ್ರಶಸ್ತಿ ಒಲಿದಿದೆ.ಕಲ್ಯಾಣ ಕರ್ನಾಟಕದಲ್ಲಿ ಸಹಕಾರ ಚಳವಳಿಗೆ ಶಕ್ತಿ ತುಂಬಿದ ಮುಂಚೂಣಿ ನಾಯಕರಲ್ಲಿ ಬಿರಾದಾರ ಕೂಡ ಒಬ್ಬರು. ಅವರು ಸಹಕಾರ ಕ್ಷೇತ್ರದ ಮೂಲಕ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಬಿರಾದಾರ ಅವರು ಒಮ್ಮೆ ರಾಜ್ಯ ಸರ್ಕಾರದ ನಾಮ ನಿರ್ದೇಶನ ಸೇರಿದಂತೆ ಸತತ ಐದನೇ ಬಾರಿಗೆ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದಾರೆ. ಮೂರು ವರ್ಷದ ಅವಧಿಗೆ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಧ್ಯಕ್ಷರಾಗಿದ್ದಾಗ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಸಂಗ್ರಹ ಪ್ರಮಾಣ 80 ಸಾವಿರ ಲೀಟರ್‍ಗೆ ಹೆಚ್ಚಿಸಿ, ಗಮನ ಸೆಳೆದಿದ್ದರು. ಹಾಲು ಉತ್ಪಾದಕರು ಹಾಗೂ ರೈತರ ಪರವಾದ ಅನೇಕ ಕ್ರಮಗಳನ್ನು ಕೈಗೊಂಡು ಮೆಚ್ಚುಗೆ ಗಳಿಸಿದ್ದರು.ಪತ್ರಕರ್ತರೂ ಆಗಿರುವ ಬಿರಾದಾರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಕನಕ ಚೇತನ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿ, ಸಮ್ಮಾನಗಳು ಸಂದಿವೆ.ಬಿರಾದಾರ ಅವರನ್ನು ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.