ಶರಣ ತತ್ವ ಅಳವಡಿಸಿಕೊಂಡರೆ ಬದುಕು ಸಾರ್ಥಕ

ಹುಲಸೂರಿನಲ್ಲಿ ಒಂದು ಕಾಲ ನಡೆಯಲಿರುವ ಪ್ರವಚನಕ್ಕೆ  ಸೋಮವಾರ ಕೂಡಲಸಂಗಮ ಜಗದ್ಗುರು ಡಾ.ಮಾತೆ ಗಂಗಾದೇವಿ ಚಾಲನೆ ನೀಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮಿ, ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ತಹಸೀಲ್ದಾರ್​ ಶಿವಾನಂದ ಮೇತ್ರೆ, ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ ಇತರರಿದ್ದರು.
ಹುಲಸೂರಿನಲ್ಲಿ ಒಂದು ಕಾಲ ನಡೆಯಲಿರುವ ಪ್ರವಚನಕ್ಕೆ ಸೋಮವಾರ ಕೂಡಲಸಂಗಮ ಜಗದ್ಗುರು ಡಾ.ಮಾತೆ ಗಂಗಾದೇವಿ ಚಾಲನೆ ನೀಡಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮಿ, ಗ್ರಾಪಂ ಅಧ್ಯಕ್ಷೆ ದೀಪಾ ರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ತಹಸೀಲ್ದಾರ್​ ಶಿವಾನಂದ ಮೇತ್ರೆ, ಅನಿಲಕುಮಾರ ರಗಟೆ, ಶಶಿಕಾಂತ ದುರ್ಗೆ ಇತರರಿದ್ದರು.
Published on: 

ಹುಲಸೂರು: ಮಹಾತ್ಮರು, ಸಂತರು ಹಾಗೂ ಯೋಗಪುರುಷರ ಜೀವನ ಚರಿತ್ರೆ ಮತ್ತು ಆದರ್ಶಗಳನ್ನು ಜನರಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಬಸವ ಪುರಾಣ ಮಾಡುತ್ತದೆ. ಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಟ್ಟು ಶರಣರ ಮಾರ್ಗದಲ್ಲಿ ನಡೆಯುವವರು ಎಂದಿಗೂ ದಾರಿ ತಪ್ಪುವುದಿಲ್ಲ, ಶರಣರ ಸಂದೇಶ ಹಾಗೂ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಆಶಯಗಳು ಸಾರ್ಥಕವಾಗುತ್ತವೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.

ಪಟ್ಟಣದ ಜಗದ್ಗುರು ಅಲ್ಲಮ ಪ್ರಭು ಶೂನ್ಯಪಿಠ ಅನುಭವ ಮಂಟಪದಲ್ಲಿ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಸ್ವಾಮೀಜಿಗಳ 75ನೇ ಅಮೃತ ಮಹೋತ್ಸವದ ನಿಮಿತ್ತ ಒಂದು ತಿಂಗಳ ಕಾಲ ನಡೆಯಲಿರುವ ಬಸವ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

12ನೇ ಶತಮಾನದಲ್ಲಿ ಅಲ್ಲಮಪ್ರಭು ನಡೆದಾಡಿದ ಪುಣ್ಯಭೂಮಿ ಹುಲಸೂರಿನಲ್ಲಿ ತಿಂಗಳ ಕಾಲ ಬಸವ ಪುರಾಣದ ಮೂಲಕ ಶಿವಶರಣರು, ಸಂತರು ಹಾಗೂ ಮಹಾತ್ಮರ ಜೀವನಾದರ್ಶಗಳನ್ನು ಜನರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಮುಗಳಖೋಡದ ತಿಮ್ಮಾಪುರ ಕಲ್ಯಾಣ ಆಶ್ರಮದ ಪ್ರವಚನ ಯೋಗಿ ಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಶರಣಾಗತಿಯ ಮಹತ್ವವನ್ನು ಸಾರಿದ್ದಾರೆ. ಲಿಂಗಾಯತ ಧರ್ಮದ ತತ್ವ ಹಾಗೂ ವಿಶ್ವಗುರು ಬಸವಣ್ಣನವರ ಸಂದೇಶದ ಸಾರವೇ ಶರಣು ಶರಣಾರ್ಥಿ. ಶರಣರ ಮಾರ್ಗದಲ್ಲಿ ನಡೆಯುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ವೈಯಕ್ತಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬದಲು ಅದರ ಸವಿನೆನಪಿಗಾಗಿ 75ನೇ ಅಮೃತ ಮಹೋತ್ಸವ ಹಾಗೂ ವಚನ ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ನಿಮಿತ್ತ ಒಂದು ತಿಂಗಳ ಕಾಲ ಬಸವ ಪುರಾಣ ಆಯೋಜಿಸಿದ್ದು, ಭಕ್ತರು ಹಾಗೂ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿ ಅಧ್ಯಕ್ಷ ಅನಿಲಕುಮಾರ ರಗಟೆ ಹಾಗೂ ತಹಸೀಲ್ದಾರ್​ ಶಿವಾನಂದ ಮೇತ್ರೆ ಮಾತನಾಡಿದರು.

ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಮಂಠಾಳದ ಅಭಿನವ ಚೆನ್ನಬಸವ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ಗಾಯಕವಾಡ, ಶಶಿಕಾಂತ ದುರ್ಗೆ, ಶಿವರಾಜ ನರಶೆಟ್ಟಿ , ಶಾಂತಾಬಾಯಿ ಬಿರಾದಾರ, ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಸಂತೋಷ ಕಾಮಶೆಟ್ಟೆ ಕುಬೇರ ಲದ್ದೆ ಇತರರಿದ್ದರು. ರಾಜಕುಮಾರ ನಿಡೋದೆ ಸ್ವಾಗತಿಸಿದರು. ಡಿ.ಸಿ.ಪಾಟೀಲ ನಿರೂಪಣೆ ಮಾಡಿದರು. ಸೀಮಾ ಸಂತೋಷ ಕಾಮಶೆಟ್ಟೆ ಪ್ರಸಾದ ವ್ಯವಸ್ಥೆ ಮಾಡಿದರು.