

ಬಸವಕಲ್ಯಾಣ: ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ತುಂಬ ಸಹಕಾರಿಯಾಗಿವೆ ಎಂದು ಸಹಾಯಕ ಅಯುಕ್ತರ ಕಚೇರಿ ತಹಸೀಲ್ದಾರ್ ಮಾವತಿ ರಾಠೋಡ ಹೇಳಿದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಿಂದ ಮಹಾದಾಸೋಹಿ ದೊಡ್ಡಪ್ಪ ಅಪ್ಪ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಆಟದ ಹಕ್ಕು&ಸಮಾನ ಹಕ್ಕು ಕಾರ್ಯಕ್ರಮ ಉದ್ಘಾಟಿಸಿದ ಅವರು, ಹೆಣ್ಣು ಮಕ್ಕಳು ಶಿಕ್ಷಣ ಮತ್ತು ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಟಿಎಚ್ಒ ಡಾ.ಪ್ರತಾಪ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ದೇಶದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಆರ್ಎಲ್ಎಚ್ಪಿ ನಿರ್ದೇಶಕಿ ಸರಸ್ವತಿ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನ 20 ಗ್ರಾಮಗಳಲ್ಲಿ ಸಂಸ್ಥೆ ಕೆಲಸ ಮಾಡುತ್ತಿದ್ದು, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ವೃತ್ತಿಪರ ತರಬೇತಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಎಸ್ಐ ಪಲ್ಲವಿ, ಶಿಕ್ಷಣ ಸಂಯೋಜಕ ರವೀಂದ್ರ ಖಂಡಾಳೆ, ಅಕ್ಕ ಪಡೆಯ ಮಂಜುಳಾ, ರಾಷ್ಟ್ರೀಯ ಮಟ್ಟದ ಯೋಗ ಪ್ರತಿಭೆ ಪ್ರೀತಿ ಮಾತನಾಡಿದರು. ನಾಗರಾಜ ಶೀಲವಂತ ಸ್ವಾಗತಿಸಿದರು. ಸ್ನೇಹಲತಾ ಮೇತ್ರೆ ವಂದಿಸಿದರು. ಸರುಬಾಯಿ ದೊಡ್ಡಿ ನಿರೂಪಣೆ ಮಾಡಿದರು.
ಕ್ರಿಕೆಟ್ ಪಂದ್ಯದಲ್ಲಿ ನೀಲಕಂಠವಾಡಿ ತಂಡ ಪ್ರಥಮ, ಮಿರ್ಜಾಪುರ ತಂಡ ದ್ವೀತಿಯ ಸ್ಥಾನ ಪಡೆಯಿತು. ಕಬಡ್ಡಿಯಲ್ಲಿ ಸಸ್ತಾಪುರ ತಂಡ ಪ್ರಥಮ, ನೀಲಕಂಠವಾಡಿ ತಂಡ ದ್ವೀತಿಯ ಹಾಗೂ ಮಡಕೆ ಒಡೆಯುವ ಆಟದಲ್ಲಿ ಖಂಡಾಳ ತಂಡ ಪ್ರಥಮ, ಧನ್ನೂರ (ಕೆ) ತಂಡ ದ್ವೀತಿಯ, ಓಟದಲ್ಲಿ ಸಮೀರಾ ಗೌರ ಪ್ರಥಮ, ಕಲ್ಪನಾ ಧನ್ನೂರ(ಕೆ) ದ್ವೀತಿಯ ಹಾಗೂ ಸಾಕ್ಷಿ ಸಸ್ತಾಪುರ ತೃತೀಯ ಸ್ಥಾನ ಪಡೆದುಕೊಂಡರು.