ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಭಿತ್ತಿಪತ್ರ ಬಿಡುಗಡೆ

ಬೀದರ್ ಉತ್ತರ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೀದರ್‍ನಲ್ಲಿ ಬಿಡುಗಡೆ ಮಾಡಿದರು.
ಬೀದರ್ ಉತ್ತರ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಬೀದರ್‍ನಲ್ಲಿ ಬಿಡುಗಡೆ ಮಾಡಿದರು.
Published on

ಬೀದರ್: ಕನ್ನಡ ಸಾಹಿತ್ಯ ಪರಿಷತ್‍ನ ಬೀದರ್ ಉತ್ತರ ಘಟಕದಿಂದ ಹಮ್ಮಿಕೊಳ್ಳಲಾದ ಬೀದರ್ ಉತ್ತರ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ನಗರದಲ್ಲಿ ಈಚೆಗೆ ಬಿಡುಗಡೆ ಮಾಡಿದರು.

ಇದೇ ಮೊದಲ ಬಾರಿಗೆ ಬೀದರ್ ಉತ್ತರ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.

ಸಮ್ಮೇಳನವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಚಿಂತನ-ಮಂಥನಕ್ಕೆ ವೇದಿಕೆ ಒದಗಿಸಲಿದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದವರಿಗೆ ಪ್ರೋತ್ಸಾಹವೂ ಸಿಗಲಿದೆ ಎಂದು ತಿಳಿಸಿದರು.

ಬೀದರ್ ಉತ್ತರ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಜುಲೈ 8 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜರುಗಲಿದೆ. ಅರ್ಥಪೂರ್ಣ ಸಮ್ಮೇಳನ ಆಯೋಜನೆಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ. ವಿವಿಧ ಸಮಿತಿಗಳ ಪದಾಧಿಕಾರಿಗಳು ಸಮ್ಮೇಳನದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೀದರ್ ಉತ್ತರ ಘಟಕದ ಅಧ್ಯಕ್ಷ ಪರಮೇಶ್ವರ್ ಬಿರಾದಾರ ಹೇಳಿದರು.

ಸಮ್ಮೇಳನದ ದಿನ ಬೆಳಿಗ್ಗೆ ಬಿ.ವಿ. ಭೂಮರಡ್ಡಿ ಕಾಲೇಜಿನಿಂದ ರಂಗ ಮಂದಿರದ ವರೆಗೆ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ವಿಜಯಕುಮಾರ ಪಾಟೀಲ ಯರನಳ್ಳಿ ಹಾಗೂ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ರಂಗ ಮಂದಿರದಲ್ಲಿ ಸಮ್ಮೇಳನ ಜರುಗಲಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಬೀದರ್ ಉತ್ತರ ಘಟಕದ ಗೌರವ ಕಾರ್ಯದರ್ಶಿ ಸಂತೋಷಕುಮಾರ ಮಂಗಳೂರೆ, ಪ್ರಮುಖರಾದ ಸಂತೋಷ್ ಸೋಲಪುರೆ, ಬಳಿರಾಮ ಕುರನಾಳೆ, ನರಸಾರೆಡ್ಡಿ, ಬಸವರಾಜ ಮೂಲಗೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net