ಹಾವಗಿಲಿಂಗೇಶ್ವರ ಶ್ರೀ ಪಟ್ಟಾಧಿಕಾರ ಮಹೋತ್ಸವಕ್ಕೆ ಚಾಲನೆ

ಅಲಿಯಂಬರ್ ಗ್ರಾಮದಲ್ಲಿ ಕಾರ್ಯಕ್ರಮ
bidar
ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಗಂಗಾಧರ ಮಠದ ಉತ್ತರಾಧಿಕಾರಿ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವಕ್ಕೆ ಹುಲಸೂರಿನ ಶಿವಾನಂದ ಚಾಲನೆ ನೀಡಿದರು.
Published on: 

ಬೀದರ್: ತಾಲ್ಲೂಕಿನ ಅಲಿಯಂಬರ್ ಗ್ರಾಮದ ಗಂಗಾಧರ ಮಠದಲ್ಲಿ ಮಠದ ಉತ್ತರಾಧಿಕಾರಿ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವ ಈಚೆಗೆ ಆರಂಭಗೊಂಡಿತು.
ಹುಲಸೂರಿನ ಶಿವಾನಂದ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು.
ಮಠಗಳಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುತ್ತದೆ. ಧರ್ಮದ ಉನ್ನತಿ ಆಗುತ್ತದೆ. ಹೀಗಾಗಿ ಊರಿಗೊಂದು ಮಠ ಇರಬೇಕು ಎಂದು ಅವರು ಹೇಳಿದರು.
ಇಂದು ಮನುಷ್ಯನ ಬಳಿ ಹಣ, ಸಂಪತ್ತು, ಸಕಲ ಸೌಕರ್ಯಗಳು ಇದ್ದರೂ ಶಾಂತಿ, ನೆಮ್ಮದಿ ಇಲ್ಲ. ಗುರುಗಳ ವಾಣಿ ಆಲಿಸುವುದರಿಂದ ಹಾಗೂ ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಜೀವನದ ನಿಜ ಆನಂದ ಅನುಭವಿಸಬಹುದು ಎಂದು ತಿಳಿಸಿದರು.
ನಾಲ್ಕು ತಿಂಗಳ ಹಿಂದೆ ಗಂಗಾಧರ ಮಠ ಹಾಳು ಬಿದ್ದಿತ್ತು. ಅಲ್ಪಾವಧಿಯಲ್ಲೇ ಅದನ್ನು ಪುನರ್ ನಿರ್ಮಾಣ ಮಾಡಿರುವ ಹಾವಗಿಲಿಂಗೇಶ್ವರ ಶಿವಾಚಾರ್ಯರ ಕಾರ್ಯ ಶ್ಲಾಘನೀಯ. ಸಮಾಜೋಧಾರ್ಮಿಕ ಕಾರ್ಯ ಮಾಡಬೇಕೆಂಬ ಹಂಬಲ ಅವರಲ್ಲಿ ಇರುವುದಕ್ಕೆ ಇದುವೇ ನಿದರ್ಶನ ಎಂದು ಹೇಳಿದರು.
ಅಲಿಯಂಬರ್ ನನ್ನ ತಾಯಿಯ ಊರು. ನನ್ನ ಜನ್ಮ ಭೂಮಿ. ಈ ಊರಿನ ಮಠದ ಪೀಠಾಧಿಪತಿ ಆಗುತ್ತಿರುವುದು ನನ್ನ ಸೌಭಾಗ್ಯ ಎಂದು ನೇತೃತ್ವ ವಹಿಸಿದ್ದ ಡಾ. ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಉಜ್ಜಯನಿ ಪೀಠದ ಶಾಖಾ ಮಠವಾದ ಗಂಗಾಧರ ಮಠ ಪುರಾತನ ಮಠಗಳಲ್ಲಿ ಒಂದಾಗಿದೆ. ಎಲ್ಲರ ಸಹಕಾರದೊಂದಿಗೆ ಈ ಮಠವನ್ನು ಮಾದರಿ ಮಠವಾಗಿಸಲು ಹಾಗೂ ಮಠದ ಭಕ್ತರ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸುವೆ ಎಂದು ತಿಳಿಸಿದರು.
ಮಠದ ಭಕ್ತರು, ಮಠದ ಪುನರ್ ನಿರ್ಮಾಣಕ್ಕೆ ತನು, ಮನ, ಧನದಿಂದ ಸಹಕರಿಸಿ, ಅದ್ಧೂರಿ ಪಟ್ಟಾಧಿಕಾರ ಮಹೋತ್ಸವ ಹಮ್ಮಿಕೊಂಡಿರುವುದು ಅತೀವ ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ಬೀದರ್‍ನ ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯ, ಹೆಡಗಾಪುರದ ದಾರಕಲಿಂಗ ಶಿವಾಚಾರ್ಯ, ಪ್ರವಚನಕಾರ ಬಸಯ್ಯ ಶಾಸ್ತ್ರಿ ಪುರಾಣಿಕ, ಗ್ರಾಮದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net