

ಚಿಟಗುಪ್ಪ: ತಾಲೂಕಿನ ಸುಕ್ಷೇತ್ರ ಮೀನಕೇರಾ ಗ್ರಾಮದ ಶ್ರೀ ಗವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ 72ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಸುಕಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದ ಸಂಭ್ರಮದೊಂದಿಗೆ ಅದ್ಧೂರಿ ರಥೋತ್ಸವ ಜರುಗಿತು.
ಗವಿಯ ಪುರಾತನ ದೇವಸ್ಥಾನದ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳ ಬಳಿಕ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್ ಹಾಗೂ ಸಂತೋಷ ಬೆಲ್ದಾಳೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರ ಜಯಘೋಷ, ವಾದ್ಯಮೇಳಗಳ ನಾದದ ನಡುವೆ ರಥ ಸಾಗುತ್ತಿದ್ದಂತೆ ಜಾತ್ರಾ ಪರಿಸರದಲ್ಲಿ ಧಾರ್ಮಿಕ ಸಂಭ್ರಮ ಮನೆ ಮಾಡಿತ್ತು. ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ ಹಣ್ಣು-ಕಾಯಿ, ಬೆಂಡು ಬತಾಸಿ ಅರ್ಪಿಸುವ ಮೂಲಕ ಹರಕೆ ತೀರಿಸಿದರು.
ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ವಾಲಿಬಾಲ, ಕ್ರಿಕೆಟ್ ಕ್ರೀಡೆ, ವಚನ ಕಂಠಪಾಠ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕುಂಭಕಳಶದ ಭವ್ಯ ಮೆರವಣಿಗೆ, ಸುಮಂಗಲೆಯರಿಗೆ ಸನ್ಮಾನ, ಪಲ್ಲಕ್ಕಿ ಮೆರವಣಿಗೆ ಹಾಗೂ ಸಾಮೂಹಿಕ ಅಗ್ನಿಪೂಜೆ ನೆರವೇರಿದವು. ಕೊನೆಯ ದಿನವಾದ ಬುಧವಾರ ಬೆಳಗ್ಗೆಯಿಂದ ಜಂಗಿ ಕುಸ್ತಿ ಪಂದ್ಯಾವಳಿ ಹಾಗೂ ರಾತ್ರಿ 8ಕ್ಕೆ ಪಲ್ಲಕ್ಕಿ ನಿರ್ಗಮನದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಕಂಡಿತು. ದೇವಸ್ಥಾನ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು, ಗಣ್ಯರು ಸೇರಿ ಭಕ್ತರು ಪಾಲ್ಗೊಂಡು ದರ್ಶನ ಪಡೆದರು.