ಕಬ್ಬಿನ ದರ ಸಿಹಿ ಸುದ್ದಿ ಶೀಘ್ರ

ಬೀದರ್‌ನಲ್ಲಿ ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.
ಬೀದರ್‌ನಲ್ಲಿ ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ ಮಾತನಾಡಿದರು.
Published on
ಬೀದರ್: ಕಬ್ಬಿನ ದರ ನಿಗದಿ ಸಂಬಂಧ ರೈತರಿಗೆ ಶೀಘ್ರ ಸಿಹಿ ಸುದ್ದಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಟನ್‌ಗೆ ಕನಿಷ್ಠ ೩೧೦೦ ರೂ. ನಿಗದಿಗೆ ಒತ್ತಾಯಿಸಿ ನಗರದಲ್ಲಿ ಐದು ದಿನಗಳಿಂದ ನಡೆದಿರುವ ರೈತರ ಅಹೋರಾತ್ರಿ ಹೋರಾಟ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ದರ ನಿಗದಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತನಾಡದೆ ನಾನೇ ಭರವಸೆ ನೀಡುವುದು ಸರಿಯಲ್ಲ. ಜಿಲ್ಲೆಯ ಎರಡು ಕಾರ್ಖಾನೆ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಇನ್ನುಳಿದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಜತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವೆ ಎಂದರು.
ಟನ್ ಕಬ್ಬಿಗೆ ರಾಜ್ಯ ಸರ್ಕಾರವೇ ೩೩೦೦ ರೂ. ದರ ನಿಗದಿಪಡಿಸಿದೆ. ಆದರೆ ಆಯಾ ಜಿಲ್ಲೆಯ ಕಬ್ಬಿನ ಇಳುವರಿ ಆಧಾರದ ಮೇಲೆ ಬೆಲೆ ನಿಗದಿ ಮಾಡಿದ್ದಾರೆ. ಹೀಗಾಗಿ ಇಲ್ಲಿನ ಇಳುವರಿ ಕಡಿಮೆ ಇದ್ದ ಕಾರಣ ಹೆಚ್ಚಿನ ದರ ನೀಡಲು ಆಗುವುದಿಲ್ಲ ಎಂದು ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದ ಖಂಡ್ರೆ, ನನ್ನ ಮೇಲೆ ವಿಶ್ವಾಸವಿಟ್ಟು ರೈತರು ಹೋರಾಟ ವಾಪಸ್ ಪಡೆಯಬೇಕು. ಎಷ್ಟಾದರೂ ದರ ಹೆಚ್ಚು ಮಾಡಿಸುವುದಾಗಿ ಹೇಳಿದರು.
ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಕಾಸಿಂ ಅಲಿ, ದಯಾನಂದ ಸ್ವಾಮಿ ಸಿರ್ಸಿ ಇತರರಿದ್ದರು.
ರಾಜಕೀಯಕ್ಕೆ ಬೇಡ ಅವಕಾಶ
ಕಬ್ಬಿನ ಬೆಲೆ ನಿಗದಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಇಲ್ಲಿ ಕೆಲವರು ರಾಜಕೀಯ ಮಾಡಲು ಬರುತ್ತಿದ್ದಾರೆ. ಇದಕ್ಕೆ ರೈತರು ಅವಕಾಶ ನೀಡಬಾರದು ಎಂದು ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು. ಭಾನುವಾರ ಧರಣಿ ಸ್ಥಳಕ್ಕೆ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಭೇಟಿ ನೀಡಿ ನನ್ನ ವಿರುದ್ದ ಏಕವಚನದಲ್ಲಿ ಮಾತನಾಡಿದ್ದಾರೆ. ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರದ ಮಟ್ಟದಲ್ಲಿ ಪ್ರಯತ್ನಿಸುವುದನ್ನು ಬಿಟ್ಟು ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಸಚಿವ ಖಂಡ್ರೆ ಬರುವುದಕ್ಕೂ ಮುನ್ನ ಧರಣಿ ಸ್ಥಳದಲ್ಲಿದ್ದ ಕೆಡಿ ಗಣೇಶ ಇತರರನ್ನು ಪೊಲೀಸರು ಹೊರಹಾಕಿದರು. ಹುಮನಾಬಾದ್‌ನಲ್ಲಿ ನಡೆದ ರೈತರ ಗಲಾಟೆಯಂತೆ ಇಲ್ಲಿ ಯಾವ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸೋಮವಾರ ಎಸ್‌ಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಎಎಸ್‌ಪಿ ಚಂದ್ರಕಾಂತ ಪೂಜಾರಿ, ನಾಲ್ಕು ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಸೇರಿ ನೂರಾರು ಪೊಲೀಸರನ್ನು ಬೆಳಗ್ಗೆಯಿಂದಲೇ ಹೋರಾಟ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಮಧ್ಯಾಹ್ನ ೩.೨೫ರ ಸುಮಾರಿಗೆ ಸಚಿವರು ಭೇಟಿ ನೀಡಿದರು. ಇದಕ್ಕೂ ಮುನ್ನ ಧರಣಿ ಸ್ಥಳಕ್ಕೆ ಶ್ರೀ ಹವಾ ಮಲ್ಲಿನಾಥ ಮಹಾರಾಜ, ಪ್ರಮುಖರಾದ ಗುಂಡುರಡ್ಡಿ, ಕಿರಣ ಖಂಡ್ರೆ, ಜನವಾದಿ ಮಹಿಳಾ ಸಂಘಟನೆ, ಕರವೇ ಅಧ್ಯಕ್ಷ ಇತರರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಬೇಡಿಕೆ ಈಡೇರದಿದ್ದಲ್ಲಿ ರಸ್ತೆ ತಡೆ ೨೧ಕ್ಕೆ
ಮಂಗಳವಾರ ಸಂಜೆವರೆಗೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದಲ್ಲಿ ನ.೨೧ರಂದು ಜಿಲ್ಲಾದ್ಯಂತ ರಸ್ತೆ ತಡೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು. ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದು, ರೈತರಿಗೆ ನ್ಯಾಯ ಕೊಡುವ ವಿಶ್ವಾಸವಿದೆ. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net