ಶಾಸಕ ಬೆಲ್ದಾಳೆ ವಿರುದ್ಧದ ಚುನಾವಣೆ ತಕಾರರು ಅರ್ಜಿ ವಜಾ

ಸುಪ್ರೀಂಕೋರ್ಟ್ ಮಹತ್ವದ ತೀರ್ಪು
bidar
ಡಾ.ಶೈಲೇಂದ್ರ ಬೆಲ್ದಾಳೆ
Published on: 

ಬೀದರ್: ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.

2023ರ ಚುನಾವಣೆಯಲ್ಲಿ ಡಾ.ಬೆಲ್ದಾಳೆ ಅವರು ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬೆಲ್ದಾಳೆ ಅವರು ಚಿಟ್ಟಾವಾಡಿ ನಿವಾಸಿ ಎಂದು ಪ್ರಮಾಣಪತ್ರದಲ್ಲಿ (ಅಫಿಡಿವಿಟ್ ನಲ್ಲಿ) ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ. ಚಿಟ್ಟಾವಾಡಿಯಲ್ಲಿ ಇವರ ಮನೆ ಅಥವಾ ಆಸ್ತಿ ಇಲ್ಲ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಅವರ ಆಪ್ತ ರಾಜಕುಮಾರ ಮಡಕಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಅ.16ರಂದು ರದ್ದುಪಡಿಸಿದೆ.‌ ಇದರೊಂದಿಗೆ ಶಾಸಕ ಬೆಲ್ದಾಳೆ ಅವರಿಗೆ ಹೈಕೋಟ್೯ ಜನಪ್ರತಿನಿಧಿಗಳ‌ ನ್ಯಾಯಾಲಯದ ಬಳಿಕ ಈಗ ಸುಪ್ರೀಂಕೋರ್ಟ್ ನಲ್ಲಿ ಸಹ ಜಯ ಸಿಕ್ಕಿದ್ದು, ಪ್ರತಿವಾದಿಗಳಿಗೆ ಮುಖಭಂಗವಾದಂತಾಗಿದೆ.

ರಾಜಕುಮಾರ ಮಡಕಿ ಸಲ್ಲಿಸಿದ್ದ ತಕಾರರು ಅರ್ಜಿಯನ್ನು 2025ರ ಮಾಚ್೯ 7ರಂದು ಹೈಕೋಟ್೯ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಡಕಿ ಅವರು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಒಂದು ವರ್ಷ ಸುದೀರ್ಘ ವಿಚಾರಣೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನೆ

ಬಳಿಕ ಸುಪ್ರೀಂಕೋರ್ಟ್ ಇವರ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಪ್ರಕರಣ ರದ್ದುಪಡಿಸಿದೆ.

ರಾಜಕುಮಾರ ಮಡಕಿ ಸಲ್ಲಿಸಿದ ಅರ್ಜಿಯಲ್ಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇವರು ಉಲ್ಲೇಖಿಸಿದ ವಿಷಯ ಸತ್ಯಕ್ಕೆ ದೂರವಾಗಿವೆ. ಮುಖ್ಯವಾಗಿ ಇವರು ಚುನಾವಣೆ ಸ್ಪರ್ಧಿ ಸಹ ಅಲ್ಲ. ಇದೊಂದು ರಾಜಕೀಯಪ್ರೇರಿತ ಹಾಗೂ ದುರುದ್ದೇಶಪೂರಿತ ಅರ್ಜಿಯಾಗಿದೆ. ಶಾಸಕರಿಗೆ ಕಿರಿಕಿರಿ ನೀಡಿ , ಮಾನಸಿಕ ಹಿಂಸೆ ನೀಡುವ ರಾಜಕೀಯ ದುರುದ್ದೇಶ ಇದರ ಹಿಂದೆ ಅಡಗಿದೆ. ಹೈಕೋಟ್೯ ಸಹ ನಮ್ಮ ವಾದ ಪುರಸ್ಕರಿಸಿದೆ. ಹೀಗಾಗಿ ಈ ಅರ್ಜಿಯನ್ನು ಸಹ ರದ್ದುಗೊಳಿಸಬೇಕು ಎಂದು ಬೆಲ್ದಾಳೆ ಅವರ ಪರ ವಕೀಲರಾದ ಸಂಜಯ್ ನೂಲಿ, ಗೌರೀಶ ಖಾಶೆಂಪುರ ಅವರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು. ಈ ಸಂಬಂಧ ನಡೆಸಿದ ವಿಚಾರಣೆ, ಸಾಕ್ಷಿ ವಿವರಣೆ, ವಿವಿಧ ದಾಖಲೆ ಪರಿಶೀಲಿಸಿದ ಬಳಿಕ ಮಡಕಿ ಅರ್ಜಿ ರದ್ದುಗೊಳಿಸಿ ತೀರ್ಪು ನೀಡಿದೆ.

ಡಾ.ಬೆಲ್ದಾಳೆ ಅವರು ಚಿಟ್ಟಾವಾಡಿ ಸ್ಥಳೀಯರಿದ್ದು, ಅಲ್ಲಿ ಆಸ್ತಿ ಹೊಂದಿದ್ದಾರೆ. ಚುನಾವಣೆಗೆ ನಾಮಪತ್ರ‌ ಸಲ್ಲಿಸುವ ವೇಳೆ ನೀಡಿದ್ದ ಪ್ರಮಾಣಪತ್ರಗಳು ಹಾಗೂ ದಾಖಲೆಗಳ ಪರಿಶೀಲನೆ ನಡೆಸಿಯೇ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಿದ್ದಾರೆ.

ಈ ಹಿಂದೆ ಒಮ್ಮೆ ಜಿಪಂ ಚುನಾವಣೆ ನಿಂತು ಗೆದ್ದಿದ್ದಾರೆ. ಹಿಂದೆ ಎರಡು ಸಲ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದು, 2023ರಲ್ಲಿ ಮೂರನೇ ಸಲ ಗೆದ್ದಿದ್ದಾರೆ. ಶಾಸಕರಿಗೆ ಅನಗತ್ಯ ಕಿರಿಕಿರಿ ನೀಡಲು ಚುನಾವಣಾ ತಕರಾರು ಅರ್ಜಿ ಸಲ್ಲಿಸಲಾಗಿದೆ. ಇಲ್ಲಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಲ್ದಾಳೆ ಪರ ವಕೀಲರು ನ್ಯಾಯಮೂರ್ತಿಗಳಿಗೆ

ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದರು. ಇವರ ವಾದವನ್ನು ಪುರಸ್ಕರಿಸಿ ತಕರಾರು ಅರ್ಜಿ ರದ್ದುಗೊಳಿಸಿ, ಈ ಪ್ರಕರಣ ವಿಲೇವಾರಿ ಮಾಡಿದೆ‌.

ಇದು ಸತ್ಯಕ್ಕೆ ಸಂದ ಜಯ

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಭಾನುವಾರ ನವರಾತ್ರಿಯ ಮಹತ್ವದ ದಿನವಾದ ದರ್ಗಾಷ್ಟಮಿಯಂದು ಚಾಂಗಲೇರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಹೈಕೋಟ್೯ ಬಳಿಕ ಇದೀಗ ಸುಪ್ರೀಂಕೋರ್ಟ್ ನಲ್ಲಿ ಸಹ ಜಯ ಸಿಕ್ಕಿದೆ. ಇದು ಕ್ಷೇತ್ರದ ಜನರ ಜಯ, ಸತ್ಯಕ್ಕೆ ಸಂದ ಜಯವಾಗಿದೆ ಎಂದು ಡಾ.ಬೆಲ್ದಾಳೆ ಹೇಳಿದರು. ವಿರೋಧಿಗಳು ನಾನು ಶಾಸಕನಾದ ಬಳಿಕ ಅನಗತ್ಯವಾಗಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ನನಗೆ ಮಾನಸಿಕ ಕಿರಿಕಿರಿ ನೀಡಬೇಕು, ಕ್ಷೇತ್ರದ ಬದಲಾಗಿ ಕೋಟ್೯ ಕಡೆಗೆ ಹೆಚ್ಚು ಸುತ್ತಾಡಬೇಕು ಎಂಬ ದುರುದ್ದೇಶ ಹೊಂದಿದ್ದರು. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸ ಇತ್ತು. ಸುಪ್ರೀಂಕೋರ್ಟ್ ನಲ್ಲಿ ಸಹ ವಿರೋಧಿಗಳ ಅರ್ಜಿ ರದ್ದಾಗಿದೆ. ಇದು ಸತ್ಯಮೇವ ಜಯತೆ ಎಂದು ಸಂಭ್ರಮ ಹಂಚಿಕೊಂಡರು.

ಪ್ರಜಾತಂತ್ರದಲ್ಲಿ ಜನರ ತೀರ್ಪು ದೊಡ್ಡದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಮಾಜಿ ಶಾಸಕ ಅಶೋಕ ಖೇಣಿ ಅವರು ಜನರ ತೀರ್ಪಿಗೆ ತಲೆಬಾಗಬೇಕಿತ್ತು. ಅದನ್ನು ಬಿಟ್ಟು ತಮ್ಮವರಿಂದ ಚುನಾವಣಾ ತಕರಾರು ಅರ್ಜಿ ದಾಖಲಿಸಿರುವುದು, ರಾಜಕೀಯ ದುರುದ್ದೇಶದಿಂದ ಕಿರಿಕಿರಿ ನೀಡಲು ಯತ್ನಿಸಿರುವುದು ಬೇಸರ ತಂದಿದೆ. ಜನರೇ ಇಂಥವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬೆಲ್ದಾಳೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net