

ಬೀದರ್: ರಾಜ್ಯದ ಸರ್ಕಾರಿ, ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಕೂಡಲೇ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಟಿ ಸೇರಿದಂತೆ ಅನೇಕ ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಕಲ್ಪಿಸುತ್ತಿಲ್ಲ. ಭಾಷೆ ಆಧಾರದಲ್ಲಿ ತಾರತಮ್ಯ ಮಾಡುತ್ತಿವೆ ಎಂದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡದ ನೆಲದಲ್ಲೇ ಕನ್ನಡಿಗರಿಗೆ ಉದ್ಯೋಗ ದೊರಕದಂಥ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳ ಹೋಂಗಾರ್ಡ್ ಹುದ್ದೆಗಳಿಗೆ ಹೊರ ರಾಜ್ಯದವರನ್ನು ನೇಮಕ ಮಾಡಿಕೊಳ್ಳುತ್ತಿದೆ. ಕೈಗಾರಿಕೆಗಳು ಕೂಡ ಸ್ಥಳೀಯರಿಗೆ ಆದ್ಯತೆ ಕೊಡುತ್ತಿಲ್ಲ ಎಂದು ದೂರಿದ್ದಾರೆ.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಖಾಸಗಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಕೇವಲ ಹೇಳಿಕೆ ಕೊಟ್ಟರೆ ಸಾಲದು. ಸರೋಜಿನಿ ಮಹಿಷಿ ವರದಿ ಜಾರಿಗೆ ಅಗತ್ಯ ಕ್ರಮ ಕೈಗೊಂಡು ಕನ್ನಡಿಗರ ಹಿತ ರಕ್ಷಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯ ಅಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ 27 ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಹೋರಾಟ ನಡೆಸುತ್ತ ಬಂದಿದೆ. ಸರ್ಕಾರ ಈ ದಿಸೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.