

ಔರಾದ್: ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದ್ದು, ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ಶೆಟ್ಟಿ ಬಣ) ಕಾರ್ಯಕರ್ತರು ಬಸ್ ಟಕದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಅನಿಲ್ ದೇವಕತ್ತೆ ಮಾತನಾಡಿ, ನಿತ್ಯ ಬೆಳಗ್ಗೆ ಏಳು ಗಂಟೆಯಿಂದ 10ರವರೆಗೆ ಹಾಗೂ ಸಂಜೆ ವೇಳೆ ಕೂಡ ಹೆಚ್ಚಿನ ಬಸ್ ಸಂಚರಿಸುವಂತೆ ಕ್ರಮಕೈಗೊಳ್ಳಬೇಕು. ನೂತನ ಬಸ್ ನೀಡಬೇಕು . ಔರಾದ್&ಬೀದರ್ ಮಾರ್ಗಕ್ಕೆ ಕೂಡಲೇ 10 ಹೊಸ ಬಸ್ ಬಿಡಬೇಕು.ನಿತ್ಯ ಬೆಳಗ್ಗೆ 7ರಿಂದ ಸಂಜೆ 8.30ರವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್ ಬಿಡಬೇಕು. ವಿದ್ಯಾರ್ಥಿ ಪಾಸ್ ಇದ್ದರೂ ಬಸ್ ನಿಲ್ಲಿಸದ ಚಾಲಕ, ನಿರ್ವಾಹಕರ ಮೇಲೆ ಕ್ರಮ ಜರುಗಿಸಬೇಕು ಮಾರ್ಗಮಧ್ಯ ಕೆಟ್ಟು ನಿಲ್ಲುತ್ತಿರುವ ಗುಜರಿ ಬಸ್ ಸಂಪೂರ್ಣ ನಿಲ್ಲಿಸಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಬೀದರ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಬೀದರ್& ಔರಾದ್ ಹೆದ್ದಾರಿ ತಡೆದು ಸಂಚಾರ ಬಂದ್ ಮಾಡಲಾಗುವುದೆಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಡಿಟಿಒ ಶಾರದ ದೇವಿ ಹಾಗೂ ಬಸ್ ಘಟಕದ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಮನವಿ ಸ್ವೀಕರಿಸಿ, ಕೂಡಲೇ ಸಮಸ್ಯೆ ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.
ಗೌರವಾಧ್ಯಕ್ಷ ಬಸವರಾಜ ಶೆಟಕಾರ, ಕಲ್ಲಪ್ಪ ದೇಶಮುಖ, ರಾಜಕುಮಾರ ನಾಯಕ, ಅರ್ಜುನ ಭಂಗೆ, ಆಕಾಶ, ಅಂಬಾದಾಸ, ಸುನೀಲ, ಸಚಿನ ಫುಲಾರಿ, ರಾಹುಲ ಇದ್ದರು.