

ಬೀದರ್: ನಗರದ ಮೋಹನ್ ಮಾರ್ಕೆಟ್ ಪ್ರದೇಶದಲ್ಲಿ ನೈರ್ಮಲ್ಯ ಹಾಗೂ ಚರಂಡಿ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಗ್ರಹಿಸಿದೆ.
ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಹಾಗೂ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ ಅವರು ಈ ಕುರಿತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲಾ ಆಸ್ಪತ್ರೆ ಸಮೀಪದ ವಿಕ್ರಮ್ ನರ್ಸಿಂಗ್ ಹೋಮ್ನಿಂದ ಹರಳಯ್ಯ ವೃತ್ತ ಮತ್ತು ಅಲ್ಲಿಂದ ಕೆಇಬಿ ವರೆಗಿನ ರಸ್ತೆ ಬದಿಯಲ್ಲಿನ ಚರಂಡಿ ವ್ಯವಸ್ಥೆ ಸರಿಯಾಗಿರದ ಕಾರಣ ಮನೆಗಳ ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರು ತೀವ್ರ ಯಾತನೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ದಶಕಗಳ ಹಿಂದೆ ನಿರ್ಮಿಸಿದ ಚರಂಡಿಯ ಸೂಕ್ತ ನಿರ್ವಹಣೆ ಮಾಡದ ಕಾರಣ ಹೊಲಸು ನೀರು ಸರಾಗವಾಗಿ ಹರಿದುಕೊಂಡು ಹೋಗುತ್ತಿಲ್ಲ. ಕೆಲ ಕಡೆ ತುಂಬಿಕೊಂಡು ನೀರು ಮನೆ, ವಾಣಿಜ್ಯ ಮಳಿಗೆಗಳಿಗೆ ನುಗ್ಗುತ್ತಿದೆ. ಜನ ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶ ನಗರದ ಹೃದಯ ಭಾಗದಲ್ಲಿದೆ. ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಅನೇಕ ಸರ್ಕಾರಿ, ಸಂಘ ಸಂಸ್ಥೆಗಳ ಕಚೇರಿಗಳಿವೆ. ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ಆದರೂ, ಮಹಾನಗರ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಪಾವತಿಸುವಲ್ಲಿ ಮುಂಚೂಣಿ ಪ್ರದೇಶವಾಗಿದ್ದರೂ, ಮಹಾನಗರ ಪಾಲಿಕೆ ಅದಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೂಡಲೇ ಚರಂಡಿ ವ್ಯವಸ್ಥೆ ಸರಿಪಡಿಸಿ, ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.