ನೀರಿನ ಸಮಸ್ಯೆ ಪರಿಹರಿಸಿದ್ದ ಬೊಮ್ಮಗೊಂಡೇಶ್ವರ

ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಕುಮಾರ ಕುಪ್ಪೆ ಹೇಳಿಕೆ
bidar
ಬೀದರ್‍ನಲ್ಲಿ ನಡೆದ ಬೊಮ್ಮಗೊಂಡೇಶ್ವರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹುಮನಾಬಾದ್ ತಾಲ್ಲೂಕು ವಿಸ್ತರಣಾಧಿಕಾರಿ ಶಿವಕುಮಾರ ಕುಪ್ಪೆ ಮಾತನಾಡಿದರು.
Published on: 

ಬೀದರ್: ಹಿಂದೆ ಈ ಭಾಗದಲ್ಲಿ ತೀವ್ರ ಬರಗಾಲ ಉಂಟಾದಾಗ ಮಹಾತ್ಮ ಬೊಮ್ಮಗೊಂಡೇಶ್ವರರು ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ್ದರು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹುಮನಾಬಾದ್ ತಾಲ್ಲೂಕು ವಿಸ್ತರಣಾಧಿಕಾರಿ ಶಿವಕುಮಾರ ಕುಪ್ಪೆ ಹೇಳಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬೊಮ್ಮಗೊಂಡೇಶ್ವರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಟೆಯಾಡಲು ಹೋಗಿದ್ದಾಗ ಬಹಮನಿ ಅರಸರು ಹಾಗೂ ಸೈನಿಕರಿಗೆ ನೀರಡಿಕೆಯಾಗಿತ್ತು. ಹುಡುಕಾಡಿದರೂ ಅವರಿಗೆ ನೀರು ಸಿಕ್ಕಿರಲಿಲ್ಲ. ಆಗ, ಬೊಮ್ಮಗೊಂಡೇಶ್ವರರು ತಮ್ಮ ಕೋಲಿನಿಂದ ಬಂಡೆ ಸರಿಸಿದಾಗ ನೀರು ಹರಿಯಲಾರಂಭಿಸಿತು. ಅದರಿಂದ ಅವರು ಅರಸರು ಹಾಗೂ ಸೈನಿಕರ ಬಾಯಾರಿಕೆ ನೀಗಿಸಿದ್ದರು ಎಂದು ತಿಳಿಸಿದರು.
ಬೊಮ್ಮಗೊಂಡೇಶ್ವರರು ನೀರು ಕುಡಿಸಿದ್ದಕ್ಕೆ ಪ್ರತಿಯಾಗಿ ಬಹಮನಿ ಅರಸ ಕುರಿ ಮಾರಾಟ ಕರವನ್ನು ರದ್ದುಪಡಿಸಿದ್ದರು. ಇದರಿಂದ ಕುರಿಗಾಹಿಗಳಿಗೆ ಸಹಾಯವಾಗಿತ್ತು ಎಂದು ಸ್ಮರಿಸಿದರು.
ಚಿದ್ರಿಯ ಶಿವಗೊಂಡ ಹಾಗೂ ಗಂಗವ್ವ ಅವರ ಉದರದಲ್ಲಿ ಜನಿಸಿದ್ದ ಬೊಮ್ಮಗೊಂಡೇಶ್ವರ ಕುರಿ ಕಾಯುವ ಕುಲ ಕಸುಬು ಮುಂದುವರಿಸಿದರು. ಮುಂದೆ ಮಹಾ ಪುರುಷರಾದರು. ತಮ್ಮ ಪವಾಡಗಳ ಮೂಲಕ ಜನರ ಅನೇಕ ಸಂಕಷ್ಟಗಳನ್ನು ದೂರ ಮಾಡಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಕಲ್ಲಪ್ಪ ರಾಯಗೊಂಡ ಮಾತನಾಡಿ, ಬೊಮ್ಮಗೊಂಡೇಶ್ವರ ಜೀವನ ಹಾಗೂ ಸಾಧನೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.
ಸಾಹಿತಿ ಮುರಳಿನಾಥ ಮೇತ್ರೆ ಬೊಮ್ಮಗೊಂಡೇಶ್ವರ ಜೀವನ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೊಲೀಸ್ ಕಾನ್‍ಸ್ಟೆಬಲ್ ಸಂತೋಷ್ ಮೇತ್ರೆ, ವಿಠ್ಠಲರಾವ್ ಭಂಗೂರೆ, ಆತ್ಮಾನಂದ ಬಂಬಳಗಿ, ಸೂರ್ಯಕಾಂತ ನಿರ್ಣಾಕರ್, ಮಲ್ಲಿಕಾರ್ಜುನ ಸಾತೋಳಿ, ಎಂ.ಪಿ. ವೈಜಿನಾಥ, ಪಂಢರಿ ಜಮಾದಾರ್, ಮಾರುತಿ ಪೂಜಾರಿ, ಸುನೀಲ್ ಚಿಲ್ಲರ್ಗಿ ಮತ್ತಿತರರು ಇದ್ದರು. ಮಲ್ಲಿಕಾರ್ಜುನ ಮುರ್ಕೆ ಸ್ವಾಗತಿಸಿದರು. ವಿಜಯಕುಮಾರ ಪೀರಗೊಂಡ ಬ್ಯಾಲಹಳ್ಳಿ ನಿರೂಪಿಸಿದರು. ಗೋವಿಂದ ದುರ್ಗೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net