

ಔರಾದ:
ಈ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನ ಸೆಳೆದ ಅವರು, ಔರಾದ ಕ್ಷೇತ್ರದಲ್ಲಿ ಪ್ರತಿವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ತಮ್ಮ ಸರ್ಕಾರದ ಅವಧಿಯಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಈ ಮಹತ್ವದ ಕಾಮಗಾರಿಯನ್ನು ಮಂಜೂರು ಮಾಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
2023ರ ಫೆಬ್ರವರಿಯಲ್ಲಿ ಕಾಮಗಾರಿಗೆ ಅನುಮೋದನೆ ದೊರೆತಿದ್ದು, 2024ರ ಜನವರಿಯಲ್ಲಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. 2026ರ ಜನವರಿಯಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಮೂರು ವರ್ಷಗಳಾದರೂ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದ್ದು, ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಕೆಲವೆಡೆ ಸ್ವಲ್ಪಸ್ವಲ್ಪವಾಗಿ ನಡೆಯುತ್ತಿದ್ದರೂ, ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ ಎಂಬ ಆರೋಪಗಳಿದ್ದು, ಕಾಮಗಾರಿಯ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಔರಾದ(ಬಿ) ಹಾಗೂ ಕಮಲನಗರ ಪಟ್ಟಣಗಳಲ್ಲಿ ಪ್ರತಿವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಗಣಿಸಿಯೇ ಈ ಯೋಜನೆಯನ್ನು ತರಲಾಗಿತ್ತು. ಆದರೆ ಕಾಮಗಾರಿ ವಿಳಂಬದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಗುತ್ತಿಗೆದಾರರು ಆರಂಭದಲ್ಲೇ ಕರಾರು ಒಪ್ಪಂದ ಮಾಡಿಕೊಳ್ಳಲು ಒಂದು ವರ್ಷ ವಿಳಂಬ ಮಾಡಿದ್ದಾರೆ. ಇದೀಗ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಕಾಮಗಾರಿ ಮತ್ತಷ್ಟು ವಿಳಂಬ ಮಾಡುತ್ತಿರುವುದು ಜನರ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಶಾಸಕರು ಹೇಳಿದ್ದಾರೆ.
ನಗರಾಭಿವೃದ್ಧಿ ಸಚಿವರಾದ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಂದ ಲಿಖಿತ ಉತ್ತರ ದೊರೆತಿದ್ದು, ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಅಧಿಕಾರಿಗಳು ಸಚಿವರಿಗೆ ವಾಸ್ತವಾಂಶಕ್ಕೆ ವಿರುದ್ಧವಾದ ಮಾಹಿತಿ ನೀಡಿದ್ದಾರೆ. ಔರಾದ, ಕಮಲನಗರ ಹಾಗೂ ಯೋಜನೆ ವ್ಯಾಪ್ತಿಯ ಗ್ರಾಮಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವಿಷಯದ ಕುರಿತು ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಚರ್ಚೆ ನಡೆಯದೆ, ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಸರ್ಕಾರ ಕೂಡಲೇ ಕಾಮಗಾರಿಯಲ್ಲಿನ ವಿಳಂಬಕ್ಕೆ ಕಾರಣಗಳನ್ನು ನಿವಾರಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಕಾಮಗಾರಿಯ ಗುಣಮಟ್ಟವನ್ನು ಖಾತರಿಪಡಿಸಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಭು ಬಿ.ಚವ್ಹಾಣ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.