ಪಟ್ಟದ್ದೇವರು ಜಯಂತ್ಯುತ್ಸವಕ್ಕೆ ಸಕಲ ಸಿದ್ಧತೆ

ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಸೋಮನಾಥಪ್ಪ ಅಷ್ಟೂರೆ, ಶಿವಕುಮಾರ ಕಮಠಾಣೆ, ಮೋಹನರಡ್ಡಿ ಇದ್ದರು.
ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಸೋಮನಾಥಪ್ಪ ಅಷ್ಟೂರೆ, ಶಿವಕುಮಾರ ಕಮಠಾಣೆ, ಮೋಹನರಡ್ಡಿ ಇದ್ದರು.
Published on
ಭಾಲ್ಕಿ: ಬಸವಾದಿ ಶರಣರ ವಚನ ಸಾಹಿತ್ಯ ಪ್ರಸಾರ, ಪ್ರಚಾರದೊಂದಿಗೆ ಗಡಿಯಲ್ಲಿ ಶಿಕ್ಷಣ ಸಂಸ್ಥೆ, ಪ್ರಸಾದ ನಿಲಯ ಸ್ಥಾಪಿಸಿ ಸಾವಿರಾರೂ ಮಕ್ಕಳ ಬಾಳು ಬೆಳಗಿಸಿದ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅವರ ೧೩೬ನೇ ಜಯಂತ್ಯುತ್ಸವ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಹಿರೇಮಠ ಸಂಸ್ಥಾನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಸೋಮವಾರ ಬಸವ ನಡಿಗೆ, ಷಟಸ್ಥಲ ಧ್ವಜರೋಹಣ, ತೊಟ್ಟಿಲ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳ ಉದ್ಘಾಟನೆ, ಗ್ರಂಥಗಳ ಲೋಕಾರ್ಪಣೆ ಸೇರಿ ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳಲಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಬೆಳಗ್ಗೆ ೬.೩೦ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮ ವರೆಗೆ ಬಸವ ನಡಿಗೆ, ಬೆಳಗ್ಗೆ ೭.೩೦ಕ್ಕೆ ಆಶ್ರಮದಲ್ಲಿ ಧ್ವಜಾರೋಹಣ, ಬೆಳಗ್ಗೆ ೧೦ಕ್ಕೆ ವಿವಿಧ ಸ್ಪರ್ಧೆಗಳ ಉದ್ಘಾಟನೆ, ಸಂಜೆ ೪.೩೦ಕ್ಕೆ ತೊಟ್ಟಿಲು ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಈಶ್ವರ ಖಂಡ್ರೆ ಉದ್ಘಾಟನೆ: ಸಂಜೆ ೫ಕ್ಕೆ ಜಯಂತ್ಯುತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡುವರು. ನವಲಗುಂದ ಸಂಸ್ಥಾನ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ರಾಣೆಬೆನ್ನೂರು ವಿರಕ್ತಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವಬೆಳವಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣಬಸವ ಸ್ವಾಮೀಜಿ ಅನುಭಾವ ನೀಡಲಿದ್ದಾರೆ. ಸಂಸದ ಸಾಗರ್ ಖಂಡ್ರೆ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸುವರು. ನಾರಂಜಾ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ. ಸಿದ್ರಾಮ ಪುಸ್ತಕ ಬಿಡುಗಡೆ ಮಾಡುವರು. ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಬಸವ ಗುರು ಪೂಜೆ ನೆರವೇರಿಸಲಿದ್ದಾರೆ. ಹಣಮಂತರಾವ ಚವ್ಹಾಣ್, ರಾಜಶೇಖರ ಅಷ್ಟೂರೆ, ಶಿವಶಂಕರ ಕಾಮಶೆಟ್ಟಿ ಇತರರು ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ ೭ಕ್ಕೆ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳು ನಡೆಸಿ ಕೊಡುವ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶನದೊಂದಿಗೆ ದಿನದ ಎಲ್ಲ ಕಾರ್ಯಕ್ರಮಗಳಿಗೆ ತೆರೆ ಬೀಳಲಿವೆ ಎಂದು ತಿಳಿಸಿದರು.
ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಮುಖಂಡ ಸೋಮನಾಥಪ್ಪ ಅಷ್ಟೂರೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಶಿವಕುಮಾರ ಕಮಠಾಣೆ, ಆಡಳಿತಾಧಿಕಾರಿ ಮೋಹನರಡ್ಡಿ ಇದ್ದರು.
ಡಾ.ಎಸ್.ಬಿ.ದುರ್ಗೆಗೆ ಕಾಯಕ ಪ್ರಶಸ್ತಿ: ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಬಸವಕಲ್ಯಾಣ ಮೂಲದ ವಿಶ್ವಬಸವಧರ್ಮ ಟ್ರಸ್ಟ್ನ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ ಅವರಿಗೆ ೨೦೨೫ನೇ ಸಾಲಿನ ಡಾ.ಚನ್ನಬಸವ ಪಟ್ಟದ್ದೇವರು ಕಾಯಕ ಪ್ರಶಸ್ತಿಯನ್ನು ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ನಾರಂಜಾ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಮ ಪ್ರಶಸ್ತಿ ದಾಸೋಹಿಗಳಾಗಿದ್ದಾರೆ ಎಂದು ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದರು.
"

ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡ ಜನರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಜತೆಗೆ ನಮ್ಮಂತಹವರನ್ನು ಸ್ವಾಮೀಜಿ ಮಾಡಿ ಸಮಾಜಕ್ಕೆ ಅರ್ಪಿಸಿದ ಶ್ರೇಯಸ್ಸು ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ.

| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರುಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು

"

ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಕೊಡುಗೆ ಎಷ್ಟೇ ಸ್ಮರಿಸಿದರೂ ಕಡಿಮೆ. ಅವರ ಜೀವನ ಸಾಧನೆಯನ್ನು ಇಂದಿನ ಯುವ ಪೀಳಿಗೆಗೆ ಸಾರುವ ಸದಾಶಯದೊಂದಿಗೆ ಜಯಂತ್ಯುತ್ಸವ ನೆಪದಲ್ಲಿ ಅನೇಕ ವಿಧಾಯಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

| ಶ್ರೀ ಗುರುಬಸವ ಪಟ್ಟದ್ದೇವರುಹಿರೇಮಠ ಸಂಸ್ಥಾನ ಪೀಠಾಧಿಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net