ಸಾಹಿತ್ಯ ಲೋಕದಲ್ಲಿ ಭೈರಪ್ಪ ಅಗ್ರಗಣ್ಯರು

ವಿರಾಜಪೇಟೆಯ ಪುರಸಭಾ ಭವನದಲ್ಲಿ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪಟ್ಟಡ ಪೂವಣ್ಣ , ರಾಜೇಶ್ ಪದ್ಮನಾಭ, ಉಷಾ ಪ್ರೀತಮ್, ಅಬ್ದುಲ್ ರೆಹಮಾನ್, ಅರ್ಜುನ್ ಮತ್ತಿತರರು ಇದ್ದರು.
ವಿರಾಜಪೇಟೆಯ ಪುರಸಭಾ ಭವನದಲ್ಲಿ ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪಟ್ಟಡ ಪೂವಣ್ಣ , ರಾಜೇಶ್ ಪದ್ಮನಾಭ, ಉಷಾ ಪ್ರೀತಮ್, ಅಬ್ದುಲ್ ರೆಹಮಾನ್, ಅರ್ಜುನ್ ಮತ್ತಿತರರು ಇದ್ದರು.
Published on

ವಿರಾಜಪೇಟೆ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ದಿ.ಎಸ್.ಎಲ್.ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದು ಬರಹಗಾರ್ತಿ ಉಷಾ ಪ್ರೀತಂ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್‌ನ ವಿರಾಜಪೇಟೆ ತಾಲೂಕು ಹಾಗೂ ಪತ್ರಕರ್ತರ ವೇದಿಕೆ ಸಹಯೋಗದಲ್ಲಿ ಇಲ್ಲಿನ ಪುರಭವನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದಿ.ಎಸ್.ಎಲ್.ಭೈರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಕನ್ನಡ ಭಾಷೆ, ನಾಡು, ನುಡಿಗೆ ಕೊಡುಗೆ ನೀಡಿದವರಲ್ಲಿ ಭೈರಪ್ಪ ಅಗ್ರಗಣ್ಯರು. ಹೀಗಾಗಿ ಸಾಹಿತ್ಯ ಲೋಕದಲ್ಲಿ ಸದಾ ಅವಿಸ್ಮರಣಿಯವಾಗಿ ಉಳಿಯಲಿದ್ದಾರೆ ಎಂದರು.

ಕವಿಗಳು ಹಾಗೂ ಸಾಹಿತಿಗಳನ್ನು ಇಂದಿನ ದಿನಗಳಲ್ಲಿ ಜಾತಿ ಲೆಕ್ಕಾಚಾರದಲ್ಲಿ ನೋಡುತ್ತಿರುವುದು ವಿಷಾದನೀಯ. ಸಾಹಿತಿಗಳು ಒಂದು ನಿರ್ದಿಷ್ಟರಾಗಿರುವುದಕ್ಕಿಂತ ನಾಡಿಗೆ ಸಂಬಂಧಿಸಿದವರಾಗಿರುತ್ತಾರೆ ಎಂದು ಹೇಳಿದರು.

ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಭೈರಪ್ಪ ಅವರ ನಿಧನ ತುಂಬಲಾರದ ನಷ್ಟ. ಅವರ ಕೃತಿಗಳನ್ನು ಸಂಪೂರ್ಣವಾಗಿ ಓದಿದಾಗ ಮಾತ್ರ ಅದರಲ್ಲಿರುವ ಪ್ರೌಢಿಮೆ ಕಾಣಸಿಗುತ್ತದೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಪುಸ್ತಕಗಳನ್ನು ಓದಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು.

ಸೇಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಅರ್ಜುನ್ ಮಾತನಾಡಿ, ಭೈರಪ್ಪ ಅವರ ಕೃತಿಗಳು ವಿಮರ್ಶೆಗೆ ಒಳಪಡುವ ವಿಚಾರ ಒಳಗೊಂಡಿದೆ. ಅತ್ಯಂತ ಹೆಚ್ಚು ವಿಮರ್ಶೆಗೆ ಒಳಗಾದ ಕೃತಿಗಳು ಭೈರಪ್ಪ ಅವರದ್ದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ರಾಜೇಶ್ ಪದ್ಮನಾಭ್ ಮಾತನಾಡಿ, ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಮೇರು ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟವರು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಸಾಹಿತ್ಯ ಕೃಷಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಸೇವೆ ಸಲ್ಲಿಸಿರುವ ಜತೆಗೆ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ ಎಂದರು.

ಭೈರಪ್ಪ ಅವರ ಜ್ಞಾಪಕಾರ್ಥ ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ ನಡೆಸಲು ಹತ್ತು ಸಾವಿರ ರೂ. ದತ್ತಿನಿದಿಧಿ ನೀಡುವುದಾಗಿ ನಿವೃತ್ತ ಪ್ರಾಂಶುಪಾಲ ಪಟ್ಟಡ ಪೂವಣ್ಣ ಘೋಷಿಸಿದರು. ನಿವೃತ್ತ ಶಿಕ್ಷಕರಾದ ಮಂಜುನಾಥ್, ಸಾವಿತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net