

ಮೂಡಿಗೆರೆ: ಗೋಣಿಬಿಡು ಹೋಬಳಿ ಜಿ.ಹೊಸಳ್ಳಿ ಗ್ರಾಮಕ್ಕೆ ಲಗ್ಗೆಯಿಟ್ಟಿರುವ ಭುವನೇಶ್ವರಿ ಗುಂಪಿನ 25 ಕಾಡಾನೆಗಳ ಗುಂಪು ಹಲವು ತೋಟಗಳಿಗೆ ನುಗ್ಗಿ ಕಾಫಿ, ಅಡಕೆ, ಬಾಳೆ, ತೆಂಗಿನ ಮರ ಸೇರಿದಂತೆ ಇತರೆ ಗಿಡಗಳನ್ನು ಧ್ವಂಸಗೊಳಿಸಿದೆ
ಜಿ.ಹೊಸಳ್ಳಿ ಗ್ರಾಮದ ನಿವೃತ್ತ ಯೋಧ ಸುರೇಶ್, ತಮ್ಮಣಗೌಡ, ಶಿವಪ್ಪಗೌಡ, ಶಿವಕುಮಾರ್ ಎಂಬುವರ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಫಸಲು ಬಿಟ್ಟಿರುವ ಅಡಕೆ ಮರ, ಗೊನೆ ಬಿಟ್ಟಿರುವ ಬಾಳೆ ಗಿಡಗಳನ್ನು, ಕಾಯಿ ಬಿಡಲು ಸಿದ್ದವಾಗಿರುವ ತೆಂಗಿನ ಮರಗಳನ್ನು ಸಂಪೂರ್ಣ ನಾಶಪಡಿಸಿದೆ. ಬೇಲೂರು ಭಾಗದಿಂದ ಕಾನಹಳ್ಳಿ ಅರಣ್ಯದ ಮೂಲಕ ಜಿ.ಹೊಸಳ್ಳಿ ಗ್ರಾಮಕ್ಕೆ ಪ್ರವೇಶಿಸಿರುವ ಭುವನೇಶ್ವರಿ ಗುಂಪಿನ ಕಾಡಾನೆಗಳು. ಜಿ.ಹೊಸಳ್ಳಿ, ಟಾಟಾ ಎಸ್ಟೇಟ್, ಹೊಸಳ್ಳಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಪಡಿಯ ಕಾಲನಿ, ದಿಣ್ಣೆಕೆರೆ ಮತ್ತಿತರ ಕಡೆ ನಿರಂತರವಾಗಿ ತಿರುಗಾಡುತ್ತಾ ಸಾರ್ವಜನಿಕರ ನಿದ್ದೆಗೆಡಿಸಿದೆ.
ಮಾಕೋನಹಳ್ಳಿ, ನಂದಿಪುರ, ಹಳಸೆ, ಚಂದ್ರಾಪುರ, ಕಮ್ಮರಗೋಡು, ಕಲ್ಲುಗುಡ್ಡ, ಕಸ್ಕೆಬೈಲ್, ಜಿ.ಹೊಸಳ್ಳಿ, ಪಡಿಯ ಕಾಲನಿ, ದಿಣ್ಣೆಕೆರೆ ಮತ್ತಿತರ ಭಾಗದಲ್ಲಿ ಕಳೆದ ಎರಡು ವರ್ಷದಿಂದ ಕಾಡಾನೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಕಾಡಾನೆ ಟಾಸ್ಕ್‌ಫೋರ್ಸ್ ಸಿಬ್ಬಂದಿ ಕಾಡಾನೆಗಳನ್ನು ಬೇಲೂರು ತಾಲೂಕಿನ ಕಾನಹಳ್ಳಿ ಅರಣ್ಯಕ್ಕೆ ಅಟ್ಟಿದರೆ ಮತ್ತೊಂದು ಗುಂಪು ಈ ಗ್ರಾಮಗಳತ್ತ ಲಗ್ಗೆಯಿಡುತ್ತದೆ. ಒಂಟಿ ಅಥವಾ ಜೋಡಿಯಾಗಿ ನಾಲ್ಕೈದು ಗುಂಪುಗಳಾಗಿ ವಿಂಗಡಣೆಯಾಗಿರುವ ಕಾಡಾನೆಗಳು, ಕೊಡಗು ಜಿಲ್ಲೆಯಲ್ಲಿ ಸಂಚರಿಸಿ ಹಾಸನ ಜಿಲ್ಲೆಗೆ ಪ್ರವೇಶ ಮಾಡುತ್ತದೆ. ಅಲ್ಲಿಂದ ಅರಣ್ಯ ಸಿಬ್ಬಂದಿ ಬೇಲೂರು ತಾಲೂಕಿನ ಕಾನಹಳ್ಳಿ ಅರಣ್ಯಕ್ಕೆ ಅಟ್ಟುವುದು ವಾಡಿಕೆ, ಕಾಡಾನೆಗಳು ಅಲ್ಲಿಂದ ಹೊರಟರೆ ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಲಗ್ಗೆಯಿಟ್ಟು ಒಂದಷ್ಟು ಉಪಟಳನೀಡಿ ರೈತರ ಬೆಳೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುತ್ತವೆ. ಆಗ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತೆ ಕಾನಹಳ್ಳಿ ಅರಣ್ಯದತ್ತ ಅಟ್ಟುತ್ತಾರೆ. ಕಳೆದ ಎರಡು ವರ್ಷದಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.