10 ವರ್ಷದಿಂದ ಚಾಲಕನಾಗಿದ್ದ ಭುವನೇಶ್

10 ವರ್ಷದಿಂದ ಚಾಲಕನಾಗಿದ್ದ ಭುವನೇಶ್
Published on

ಹಾಸನ: ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಭೀಕರ ದುರಂತ ಸಂಭವಿಸಲು ಕಾರಣನಾದ ಟ್ರಕ್ ಚಾಲಕ ಕಳೆದ 10 ವರ್ಷದಿಂದ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಟ್ರಕ್ ಚಾಲಕ ಭುವನೇಶ್ ಬಗ್ಗೆ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಜನರು ಮಾಹಿತಿ ಹಂಚಿಕೊಂಡಿದ್ದಾರೆ. ಭುವನೇಶ್ ಒಳ್ಳೆಯ ಹುಡುಗ. ಭುವನೇಶ್ ಎರಡು ವರ್ಷಗಳ ಹಿಂದೆ ಪತ್ನಿ ಕಳೆದುಕೊಂಡಿದ್ದು, ತಾಯಿ-ತಂದೆ ಮಗಳ ಜತೆ ಹೊಳೆನರಸೀಪುರದಲ್ಲಿ ವಾಸವಾಗಿದ್ದಾನೆ. ಗ್ರಾಮದಲ್ಲಿ ಸ್ವಂತ ಮನೆ ಹಾಗೂ ಸ್ವಲ್ಪ ಜಮೀನು ಹೊಂದಿರುವ ಆತ ಸೆ.12 ರಂದು ಕೆಲಸ ಮುಗಿಸಿ ಹೊಳೆನರಸೀಪುರದ ಮನೆಗೆ ತೆರಳುತ್ತಿದ್ದನು. ಈ ವೇಳೆ ಅಪಘಾತ ಸಂಭವಿಸಿದೆ ಎನ್ನುತ್ತಾರವರು.

ಮೈಸೂರಿನ ಆಸ್ಪತ್ರೆಗೆ ರವಾನೆ: ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಸಂಭವಿಸಿದ ದುರಂತದಲ್ಲಿ ಗಾಯಗೊಂಡು ಹಿಮ್ಸ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಆಕಾಶ್(21)ನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಕಾಶ್ ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ.

ರಮ್ಲರ್ ವೀಕ್ಷಿಸಿದ ಎಚ್.ಡಿ.ರೇವಣ್ಣ: ಮೊಸಳೆಹೊಸಳ್ಳಿ ಗ್ರಾಮದಲ್ಲಿ ದುರಂತ ಸಂಭವಿಸಿದ ಜಾಗದಲ್ಲಿ ರಮ್ಲರ್ ಅಳವಡಿಕೆ ಕಾರ್ಯ ನಡೆದಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಸ್ಥಳ ವೀಕ್ಷಿಸಿದರು. ನಂತರ ಮಾತನಾಡಿ, ಅಧಿಕಾರಿಗಳು ಮೊದಲೇ ಈ ರೀತಿ ಕ್ರಮ ಕೈಗೊಂಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದರು.

ಐಪಿಎಸ್ ಅಧಿಕಾರಿ ಮೃತಪಟ್ಟ ಕಿತ್ತಾನೆಗಡಿಯಲ್ಲೂ ಹಂಪ್ ಹಾಕಲು ಸೂಚನೆ ನೀಡಲಾಗಿದೆ. ಮೊಸಳೆಹೊಸಳ್ಳಿ ಇಂಜಿನಿಯರಿಂಗ್ ಕಾಲೇಜು ಬಳಿಯೂ ಹಂಪ್ ಹಾಕಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಾಶ್ವತ ಪರಿಹಾರಕ್ಕಾಗಿ ಬೈಪಾಸ್ ಅಥವಾ ಫ್ಲೈಓವರ್ ನಿರ್ಮಾಣ ಮಾಡುವ ಬಗ್ಗೆ ದೇವೇಗೌಡರ ಜತೆ ಚರ್ಚೆ ಮಾಡಿದ್ದೇನೆ. ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಶ್ವತ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ. ಪಿಡಿಒ ಮತ್ತು ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡಗಳು ನಿರ್ಮಾಣವಾಗುತ್ತಿವೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net