ಮಂಡ್ಯ ಸಮ್ಮೇಳನಕ್ಕೆ ಭುವನಗಿರಿ ಕನ್ನಡ ಜ್ಯೋತಿ

KASAPA MAHESH JOSHI
Published on

ಸಿದ್ದಾಪುರ: ಭುವನಗಿರಿಯಿಂದ ಕೊಂಡೊಯ್ಯುವ ಕನ್ನಡ ಜ್ಯೋತಿಯಿಂದ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಜ್ಯೋತಿ ರಥ ಉದ್ಘಾಟನೆ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಹಾವೇರಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭುವನಗಿರಿಯಿಂದಲೇ ಕನ್ನಡ ಜ್ಯೋತಿ ಒಯ್ಯಲಾಗಿತ್ತು. ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದಲ್ಲದೆ, ರಾಜ್ಯಪಾಲರಿಂದಲೂ ಉಲ್ಲೇಖಿಸಲ್ಪಟ್ಟಿದೆ. ಅದೇರೀತಿ ಮಂಡ್ಯದಲ್ಲಿ ಡಿ. 20, 21 ಹಾಗೂ 22ರಂದು ನಡೆಯುವ 87ನೇ ಸಮ್ಮೇಳನ ಒಂದು ದೊಡ್ಡಸವಾಲು ಹಾಗೂ ಅವಕಾಶವೂ ಆಗಿದೆ. ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರ ಸಹಕರಿಸಬೇಕು ಎಂದರು.

ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಗೆ ಪೂಜೆ, ಸಭಾ ಕಾರ್ಯಕ್ರಮ, 11 ಗಂಟೆಗೆ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನ ರಥಯಾತ್ರೆ ಸಂಚರಿಸಲಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ ಆರ್. ನಾಯ್ಕ, ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಎನ್. ವಾಸರೆ, ಸಿಪಿಐ ಕುಮಾರ ಕೆ. ಇತರರಿದ್ದರು.

ಕಸಾಪ ತಾಲೂಕಾಧ್ಯಕ್ಷ ಗೋಪಾಲ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net