ಭುವನ ಸುಂದರಿ ಡಾ. ಶೃತಿಗೆ ಸನ್ಮಾನ

New Rajanna
Published on

ಹುಬ್ಬಳ್ಳಿ : ಯೂನಿವರ್ಸಲ್ ಪಿಟೈಟ್ ಯೂನಿವರ್ಸಲ್ -2024 (ಭುವನ ಸುಂದರಿ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಹುಬ್ಬಳ್ಳಿ ಮೂಲದ ಡಾ. ಶೃತಿ ಹೆಗಡೆ ಅವರಿಗೆ ಜು. 14ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಧಾರವಾಡ ಎಸ್.ಕೆ. ಮಾಡಲಿಂಗ್ ಏಜೆನ್ಸಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಡಾ. ಕಳಸೂರಿಮಠ, ಡಾ. ರಮೇಶ, ಪ್ರೊ. ಮಹೇಶ ದ್ಯಾವಪ್ಪನವರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

2018ರಲ್ಲಿ ಮೊದಲ ಬಾರಿಗೆ ಡಾ. ಶೃತಿ ಅವರು ಮಿಸ್ ಧಾರವಾಡ ಸ್ಪರ್ಧೆಗೆ ಸ್ಪರ್ಧಿಸಿದ್ದರು. ನಂತರ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಬಳಿಕ ಮಿಸ್ ಸೌಥ್ ಇಂಡಿಯಾದಲ್ಲಿ ಗೆಲುವು, ಮಿಸ್ ಏಷಿಯಾ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅಮೇರಿಕಾದ ಫ್ಲೋರಿಡಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಭುವನ ಸುಂದರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಾ. ಶೃತಿ ಅವರು ಕುಚುಪುಡಿ, ಭರತನಾಟ್ಯ, ಕಥಕ್ ನೃತ್ಯಗಳಲ್ಲಿಯೂ ಪರಿಣಿತಿ ಹೊಂದಿದ್ದಾರೆ. ಕ್ಯಾಲಿಗ್ರಫಿ ಪೇಂಟಿಂಗ್​ನಲ್ಲೂ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಕಮಲಾ ಹೆಗಡೆ, ಡಾ. ಕೃಷ್ಣ ಮಹಾಬಲೇಶ್ವರ ಹೆಗಡೆ, ಶಂಕರ ಧಾರವಾಡ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net