ಭೂಸನೂರಮಠ ಸಾಹಿತ್ಯ ಪುರಸ್ಕಾರ ಪ್ರದಾನ 8ರಂದು

3 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನಗರದ ಸಂ.ಶಿ. ಭೂಸನೂರಮಠ ಪ್ರತಿಷ್ಠಾನ ವತಿಯಿಂದ ನೀಡುವ ‘ಸಂ.ಶಿ. ಭೂಸನೂರಮಠ 2023’ ಸಾಹಿತ್ಯ ಪುರಸ್ಕಾರಕ್ಕೆ ಸಾಹಿತಿ, ಮಾಜಿ ಸಚಿವೆ ಡಾ. ಲೀಲಾದೇವಿ ಪ್ರಸಾದ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನ. 8ರಂದು ಸಂಜೆ 5.30ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 15 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಲೀಲಾದೇವಿ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಈ ಗೌರವ ನೀಡಲಾಗುತ್ತಿದೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸುವ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು. ಡಾ. ಗುರುದೇವಿ ಹುಲ್ಲೆಪ್ಪನವರ ಅಭಿನಂದನಾ ನುಡಿಗಳನ್ನಾಡುವರು. ಡಾ. ಬಸವರಾಜ ಜಗಜಂಪಿ ವಿಶೇಷ ಉಪನ್ಯಾಸ ನೀಡುವರು. ಹಿರಿಯ ನಾಗರಿಕ ಎಂ.ವಿ. ವಡ್ಡೀನ ಅವರಿಗೆ ಸನ್ಮಾನಿಸಲಾಗುವುದು ಎಂದರು.
ಶಶಿಧರ ತೋಡಕರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net