ಬಂಗಾರದ ಆಸೆಗೆ ಕಬ್ಬಿನ ಗದ್ದೆಗೆ ಎಳೆದೊಯ್ದ ಭೂಪ, ವೃದ್ಧೆಯನ್ನು ಬದುಕಲೂ ಬಿಡಲಿಲ್ಲ

old women murder in kalaghatagi
Published on

ಕಲಘಟಗಿ: ತಾಲೂಕಿನ ಆಲದಕಟ್ಟಿ ಗ್ರಾಮದ ಹೊರವಲಯದಲ್ಲಿ ಬಂಗಾರದ ಆಸೆಗೆ ವೃದ್ಧೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.


ನೆಲ್ಲಿಹರವಿ ಗ್ರಾಮದ ಮಲ್ಲಪ್ಪ ಶಂಕ್ರಪ್ಪ ಹುಲ್ಲಂಬಿ (54) ಬಂಧಿತ ಆರೋಪಿ.


ತಾಲೂಕಿನ ನೆಲ್ಲಿಹರವಿ ಗ್ರಾಮದ (82) ವರ್ಷದ ತಿಪ್ಪವ್ವ ತಂಬೂರ ಎಂಬ ವೃದ್ಧೆಯನ್ನು ಆಲದಕಟ್ಟಿ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬಿನ ಜಮೀನಿನಲ್ಲಿ ಮೇ 27ರಂದು ಹತ್ಯೆಗೈದು ವೃದ್ಧೆಯ ಕೊರಳಲಿದ್ದ ಚಿನ್ನಭಾರಣ ದೋಚಿಕೊಂಡು ಆರೋಪಿ ಪರಾರಿಯಾಗಿದ್ದ.


ಪ್ರಕರಣ ದಾಖಲಿಸಿಕೊಂಡಿದ್ದ ಕಲಘಟಗಿ ಪೊಲೀಸರು, ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಎಸ್‌ಪಿ ಹಾಗೂ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಕಲಘಟಗಿ ಪೊಲೀಸ್ ಠಾಣೆ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.


ಕೆಲ ದಿನಗಳ ಹಿಂದೆ ಮಲ್ಲಪ್ಪ ಶಂಕ್ರಪ್ಪ ಹುಲ್ಲಂಬಿ ವೃದ್ಧೆಯ ಹತ್ತಿರ 10 ಸಾವಿರ ರೂ. ಸಾಲ ಪಡೆದಿದ್ದ. ಹಣ ಮರಳಿ ಕೊಡು ಎಂದು ವೃದ್ಧೆ ಹಲವು ಬಾರಿ ಈತನನ್ನು ಕೇಳಿದ್ದಾಳೆ. ಆದರೆ, ಹಣ ನೀಡಲಾಗದೆ ಮಹಿಳೆ ಕಿರಿಕಿರಿ ತಾಳಲಾರದೆ ಆಕೆಯ ಕೊರಳಲ್ಲಿದ್ದ ಬಂಗಾರ ಆಭರಣದ ಮೇಲೆ ಕಣ್ಣು ಹಾಕಿದ್ದಾನೆ.

ಮೇ 27ರಂದು ವೃದ್ಧೆ ಕಲಘಟಗಿಯಿಂದ ಮರಳಿ ಆಲದಕಟ್ಟಿ ಗ್ರಾಮಕ್ಕೆ ಹೋಗುವಾಗ ಆಕೆಯ ಜತೆಯಲ್ಲಿ ತೆರಳಿದ ಆತ, ಆಲದಕಟ್ಟಿ ಕ್ರಾಸ್‌ನಿಂದ ಸ್ವಲ್ಪ ದೂರ ಹೋಗಿ ನಿನಗೆ ಉಪ್ಪಿನಕಾಯಿ ಹಾಕಲು ನಮ್ಮ ಹೊಲದಲ್ಲಿನ ಮಾವಿನಕಾಯಿ ಕೊಡುತ್ತೇನೆ ಬಾ ಎಂದು ಸುಳ್ಳು ಹೇಳಿ ರಸ್ತೆ ಪಕ್ಕದ ಕಬ್ಬಿನ ಹೊಲಕ್ಕೆ ಎಳೆದೊಯ್ದು ಚಾಕುವಿನಿಂದ ವೃದ್ಧೆಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ.

ನಂತರ ಆಕೆಯ ಕೊರಳಲ್ಲಿದ್ದ ಬಂಗಾರ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದನು ಎಂದು ಸಿಪಿಐ ಶ್ರೀಶೈಲ ಕೌಜಲಗಿ ಮಾಹಿತಿ ನೀಡಿದರು. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net