

ಮುದ್ದೇಬಿಹಾಳ: ಮೊಹರಂ ನಿಮಿತ್ತ ಕೂಡಿಸಿದ್ದ ಅಲಾಯಿ ದೇವರ ದಫನ್‌ಗೂ ಮುನ್ನ ಗುದ್ದಲಿ (ಗುಂಡಿ)ಯಲ್ಲಿ ಕೆಂಡ ಹಾಕಿ ಅದರ ಮೇಲೆ ಕಂಬಳಿ ಹಾಸಿ ಕೂತು ಭಕ್ತನೋರ್ವ ಭಕ್ತಿ ಪರಾಕಾಷ್ಠೆ ಮೆರೆದಿದ್ದಾನೆ.
ತಾಲೂಕಿನ ಅಮರಗೋಳ ಗ್ರಾಮದಲ್ಲಿ ಶನಿವಾರ ನಸುಕಿನ ಜಾವ ಗ್ರಾಮದ ಭಕ್ತ ಯಲ್ಲಾಲಿಂಗ ಹಿರೇಹಾಳ ಅವರು ಕೆಂಡದ ಮೇಲೆ ಕೂತು ಗಮನ ಸೆಳೆದಿದ್ದಾರೆ.
ಗ್ರಾಮದಲ್ಲಿ ಊರ ಹೊರಗೆ ಮತ್ತು ಊರ ಒಳಗೆ ಎರಡು ಮಸೀದಿಗಳಿವೆ. ಹೊರಗಿನ ಮಸೀದಿಯ ಮುಂದೆ ಹಾಕಿದ್ದ ಗುಂಡಿಯಲ್ಲಿದ್ದ ನಿಗಿನಿಗಿ ಕೆಂಡದ ಮೇಲೆ ಯಲ್ಲಾಲಿಂಗ ಕಂಬಳಿ ಹಾಸಿ ಅದರ ಮೇಲೆ ಐದು ಸೆಕೆಂಡ್ ಕುಳಿತು ಅಲಾಯಿ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.
ಧೂಪದಾರತಿಗೆ ಬರಿಗೈಯಿಂದ ಕೆಂಡ ತುಂಬಿ ಅಲಾಯಿ ದೇವರುಗಳಿಗೆ ಬೆಳಗಿದ್ದಾರೆ. ಬೆಂಕಿ ಮೇಲೆ ಕುಳಿತರೂ, ಕೈಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಯಲ್ಲಾಲಿಂಗನ ಭಕ್ತಿ ಪರಾಕಾಷ್ಠೆಗೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.