ಅನುಕಂಪದಲ್ಲಿ ಕೊಟ್ಟ ಜಾಗ ನಂದೇ ಎಂದ ಭೂಪ!

0000
Published on

ಶ್ರೀನಿವಾಸಪುರ: ಹೊಸಮನೆ ನಿಮಾರ್ಣವಾಗುವವರೆಗೂ ಇರಲು ಜಾಗ ಕೊಟ್ಟರೆ, ಈಗ ಆ ಜಾಗವೇ ನಮ್ಮದೆಂದು ಆಶ್ರಯ ಪಡೆದವರು ವರಸೆ ಬದಲಿಸಿದ್ದಾರೆ.

ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಪಂ ವ್ಯಾಪ್ತಿಯ ಗುಮ್ಮರೆಡ್ಡಿಪುರದಲ್ಲಿ 20 ವರ್ಷಗಳ ಹಿಂದೆ ಪಶು ಆಸ್ಪತ್ರೆಗಾಗಿ ಸರ್ಕಾರದಿಂದ ಕಟ್ಟಡವೊಂದನ್ನು ನಿರ್ಮಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಪಕ್ಕದ ಗ್ರಾಮದಲ್ಲಿ ಪಶು ಆಸ್ಪತ್ರೆ ಮೀಸಲಾದ ಕಾರಣ ಕಟ್ಟಡ ಹಾಗೆಯೇ ಉಳಿದಿತ್ತು. 5 ವರ್ಷಗಳ ಹಿಂದೆ ಅದೇ ಗ್ರಾಮದ ವೆಂಕಟರಾಮ್​ ನಾಯಕ್​ ಎಂಬಾತನ ಕುಟುಂಬಕ್ಕೆ ವಾಸಕ್ಕೆ ಮನೆ ಇರಲಿಲ್ಲ. ಆದ್ದರಿಂದ ಗ್ರಾಮಸ್ಥರು ಹೊಸ ಮನೆ ನಿರ್ಮಾಣವಾಗುವವರೆಗೂ ಪಶು ಆಸ್ಪತ್ರೆ ಕಟ್ಟಡದಲ್ಲಿ ವಾಸವಿರಲು ಅನುಕಂಪದಿಂದ ಅನುವು ಮಾಡಿಕೊಟ್ಟಿದ್ದರು. ಆದರೆ, ಈಗ ಆತ ಸ್ವಂತ ಮನೆ ನಿರ್ಮಿಸಿಕೊಂಡಿದ್ದರೂ ಸಾರ್ವಜನಿಕ ಕಟ್ಟಡ ಬಿಡದೆ ಸ್ವಂತ ಮನೆ ಎಂದೇ ಹೇಳಿಕೊಂಡು ಕಟ್ಟಡದ ಸುತ್ತಮುತ್ತಲ ಜಾಗದಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾನೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದು, ಈ ಮೇರೆಗೆ ದಳಸನೂರು ಗ್ರಾಪಂ ಪ್ರಭಾರ ಪಿಡಿಒ ಮಂಗಳಾಂಬಾ ಸ್ಥಳ ಪರಿಶೀಲನೆ ನಡೆಸಿ, ಸದರಿ ಮನೆಯ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ. ಸೂಕ್ತ ದಾಖಲೆ ಸಲ್ಲಿಸದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿ, ಕಟ್ಟಡ ತೆರವು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net