

ಬೆಳಗಾವಿ: ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಪರಿಕಲ್ಪನೆ ಮೇಲೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿಯೇ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣ ವರ್ಷದಿಂದ ವರ್ಷಕ್ಕೆ ಸಾಕಷ್ಟು ಬದಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಾಘವಾಡೆ ಗ್ರಾಮದಿಂದ ಮಾರ್ಕಂಡೇಯ ನಗರದವರೆಗಿನ ರಸ್ತೆ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಂದಾಜು 4 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸಿ, ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ. ನಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿಬಸ್ತವಾಡ, ವಾಘವಾಡೆ ಗ್ರಾಮಗಳ ಮುಖ್ಯರಸ್ತೆಯಿಂದ ಕಾಳೆನಟ್ಟಿ ಗ್ರಾಮದವರೆಗಿನ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ನಂತರ ಕ್ಷೇತ್ರದ ಮಾರ್ಕಂಡೇಯ ನಗರದ ಮುಖ್ಯರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಯುವರಾಜ ಕದಂ, ನಿಂಗಪ್ಪ ತಲ್ಲೂರಿ, ಬಾಳೇಶ ನಾಯ್ಕ, ಮಂಗೇಶ ನಾಯ್ಕ, ದೀಪಕ ಕಲ್ಲೂರಿ, ಸಾತೇರಿ ಕೋಕಿತಕರ, ಸಾಗರ ತಹಶೀಲ್ದಾರ್, ವೈಶಾಲಿ ಕಾಂಬಳೆ, ಸುನೀಲ ಪಾಟೀಲ, ನಾಗೇಂದ್ರ ಪಾಟೀಲ, ಮಾರುತಿ ದೇಸಾಯಿ, ಪ್ರಮೋದ ಲೋಹಾರ, ಶುಭಂ ಲೋಕಾರ, ವಿನಾಯಕ ಗುರವ, ಕಲ್ಲಪ್ಪ ಹುಂದ್ರೆ, ಬಾವಕಣ್ಣ ಪಾಟೀಲ, ಸಂತೋಷ ಅಂಬೋಳ್ಕರ ಇತರರಿದ್ದರು.