

ಗುಂಡ್ಲುಪೇಟೆ: ಶಾಸಕ ಗಣೇಶ್ ಪ್ರಸಾದ್ ಅವರು ಬಿಜೆಪಿ ಅವಧಿಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸುತ್ತಾ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಗರ್ ಹುಕುಂ ಹಕ್ಕುಪತ್ರ ನೀಡಲು ಸಮಿತಿ ರಚಿಸಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿದ್ದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ. ತಾವು ಪ್ರತಿ ವಾರ ಅಧಿಕಾರಿಗಳ ಜತೆಗೂಡಿ ಬಗರ್ ಹುಕುಂ ಸಮಿತಿಯ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರ್ತಿಸಿ 420 ಜನರಿಗೆ ಹಕ್ಕು ಪತ್ರ ನೀಡಿದ್ದು ಇನ್ನೂ 110 ಫಲಾನುಭವಿಗಳಿಗೆ ವಿತರಣೆ ಮಾಡುವ ಸಂದರ್ಭದಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಆದರೆ ಹೊಸ ಸರ್ಕಾರ ಇನ್ನು ಬಗರ್ ಹುಕುಂ ಸಮಿತಿಯನ್ನೇ ರಚಿಸದಿದ್ದರೂ ಶಾಸಕ ಗಣೇಶ್ ಪ್ರಸಾದ್ ತಾವೇ ಹಕ್ಕುಪತ್ರ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪಟ್ಟಣಕ್ಕೆ ಎಕ್ಸ್‌ಪ್ರೆಸ್ ನೀರು ಪೂರೈಕೆ ಮಾರ್ಗ ಸೇರಿದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕೆಲಸಗಳಿಗೆ ಶಾಸಕ ಗಣೇಶ್ ಪ್ರಸಾದ್ ಭೂಮಿಪೂಜೆ ಮಾಡುತ್ತಿದ್ದಾರೆ ಅಷ್ಟೆ. ತಾವು ಶಾಸಕರಾಗಿದ್ದಾಗ ಕಳೆದ ವರ್ಷ ಜೂನ್‌ನಿಂದ ಮಾರ್ಚ್‌ವರೆಗೂ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ತಾಲೂಕಿನಲ್ಲಿ ಅಂತರ್ಜಲ ಸಮಸ್ಯೆ ತಲೆದೋರಿಲ್ಲ. ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆರಂಭಿಸಲಿ ಎಂದು ಒತ್ತಾಯಿಸಿದರು.
ಬಗರ್‌ಹುಕುಂ ಸಮಿತಿಯ ಮಾಜಿ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಮಾಜಿ ಸದಸ್ಯ ಹರಿಶ್ಚಂದ್ರ, ಮುಖಂಡ ಎಲ್.ಸುರೇಶ್ ಇತರರು ಇದ್ದರು.