

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ತಾಲೂಕಿನ ಅಭಿವೃದ್ಧಿಗೆ ಸಿದ್ಧನಿದ್ದೇನೆ. ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಭಕ್ತರಹಳ್ಳಿ ಹಾಗೂ ಪೂಜೇನ ಅಗ್ರಹಾರ ಗ್ರಾಮಗಳಲ್ಲಿ 1.5 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 207ರಿಂದ ಭಕ್ತರಹಳ್ಳಿ ಮಾರ್ಗವಾಗಿ ಕೋಡಿಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ 75 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ವಿಶ್ವೇಶ್ವರಯ್ಯ ಜಲನಿಗಮ ಭಾಗ್ಯ ಯೋಜನೆಯಡಿ 10 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಚರಂಡಿ ನಿರ್ಮಾಣ, ಸ್ಥಳೀಯ ಪ್ರಾದೇಶಾಭಿವೃದ್ಧಿ ಯೋಜನೆಯಡಿ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ 12.5 ಲಕ್ಷ ರೂ.ವೆಚ್ಚದ ಸಿಸಿ ಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಜಲಜೀವನ್ ಮಿಷನ್ ಕಾಮಗಾರಿ ಹಾಗೂ ಸಿಎಸ್‌ಆರ್ ಅನುದಾನದಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 5 ನೂತನ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಜನತೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ತಿಳಿಸಿದರು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ತಾಲೂಕಿನಲ್ಲಿ 10 ವರ್ಷಗಳಿಂದ ಅಬಿವೃದ್ಧಿ ಕೆಲಸ ಕುಂಟುತ್ತಾ ಸಾಗಿದ್ದವು, ಆದರೆ ಈಗ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಜಲಜೀವನ್ ಮಿಷನ್ ಯೋಜನೆ ಸದ್ಬಳಕೆ ಮಾಡಿಕೊಳ್ಳಿ. ನೀರನ್ನು ಮಿತವಾಗಿ ಬಳಸಿ, ಪರಿಸರ ಸಂರಕ್ಷಣೆಯ ಹೊಣೆ ಪ್ರತಿಯೊಬ್ಬರೂ ಹೊರಬೇಕು. ಇಲ್ಲದಿದ್ದರೆ ಕೇರಳದಲ್ಲಿನ ಪರಿಸ್ಥಿತಿ ನಾವುಗಳೂ ಎದುರಿಸಬೇಕಾಗುತ್ತದೆ ಎಂದರು.
ಗ್ರಾಮದ ಡೇರಿ ವತಿಯಿಂದ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಉಚಿತ ಹಾಲಿನ ಕ್ಯಾನ್, ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪರಿಕರ ವಿತರಿಸಲಾಯಿತು. ದೊಡ್ಡಗಟ್ಟಿಗನಬ್ಬೆ ಗ್ರಾಪಂ ಸದಸ್ಯರಾದ ಮಂಜು, ನಿರ್ಮಲಾ, ಮುಖಂಡರಾದ ಭಗವಂತಪ್ಪ, ವಾಸುದೇವ, ಕುಮಾರ್, ಚಂದ್ರೇಗೌಡ ಇದ್ದರು.