ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯ ಶೂನ್ಯ

Bhumi Puja for various development works
Bhumi Puja for various development works on madanayakanahalli
Published on

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಾಗ್ದಾಳಿ

ಗೃಹಲಕ್ಷ್ಮೀಯರಿಗೆ ಬಾರದ ಹಣ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರಾಜ್ಯ ಸರ್ಕಾರದ ನೀಡಿರುವ ಗ್ಯಾರಂಟಿಗಳಿಂದ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಹೊಸ ಸರ್ಕಾರ ರಾಜ್ಯದಲ್ಲಿ ರಚನೆಯಾಗಿದ್ದು ವಿವಿಧ ಕಾರಣಗಳಿಂದ ಅನುದಾನ ನೀಡುವಲ್ಲಿ ವಿಫಲವಾಗಿದೆ. ಜತೆಗೆ ಬಿಬಿಎಂಪಿ ವ್ಯಾಪ್ತಿಯ ಬಿಜೆಪಿ ಶಾಸಕರನ್ನು ಹೊರತುಪಡಿಸಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಿಗೆ ಅನುದಾನ ನೀಡಿಲ್ಲ. ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಬೋರ್‌ವೆಲ್ ಕೊರೆಸಲು ಸರ್ಕಾರ ಅನುದಾನ ನೀಡದೇ ಇರುವುದು ಬೇಸರದ ಸಂಗತಿ. ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಿದರೆ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.

ಗೃಹಲಕ್ಷ್ಮೀಯರಿಗೆ ಬಾರದ ಹಣ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿಯಲ್ಲಿ ಎಷ್ಟೋ ಗೃಹಲಕ್ಷ್ಮೀಯರಿಗೆ ಹಣ ಬಂದಿಲ್ಲ. ಕರೆಂಟ್ ಬಿಲ್ ಹೆಚ್ಚಳ ಮಾಡಿ ಜನರಿಗೆ ಟೋಪಿ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಜತೆಗೆ ಉಚಿತ ಪ್ರಯಾಣದಿಂದ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ರಾಜ್ಯ ಬರಗಾಲವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವರ್ಗಾವಣೆ ದಂಧೆ ರಾಜ್ಯ ಸರ್ಕಾರದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ, ಪೌರಾಯುಕ್ತ, ತಹಸೀಲ್ದಾರ್, ಪೊಲೀಸ್ ಇಲಾಖೆ ಸೇರಿದಂತೆ ಪ್ರತಿಯೊಬ್ಬ ಅಧಿಕಾರಿ ವರ್ಗಾವಣೆಗೆ ಲಂಚ ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ವರ್ಗಾವಣೆ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ರಾಜ್ಯದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಸಾಕಷ್ಟು ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net