ಬರಪೀಡಿತ ತಾಲೂಕು ಘೋಷಣೆಗಾಗಿ ಸಿಎಂಗೆ ಮನವಿ

mkg1
Published on

ಹೊನ್ನಾಳಿ: ತಾಲೂಕಿನಲ್ಲಿ ಮಳೆ ಕೊರತೆ ಮುಂದುವರಿದರೆ ಬರಗಾಲ ಸಂಭವಿಸುವ ಎಲ್ಲ ಲಕ್ಷಣಗಳಿದ್ದು, ಬರಪೀಡಿತ ತಾಲೂಕು ಘೋಷಣೆಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಪ್ರೌಢಶಾಲೆ ಆವರಣದಲ್ಲಿ ಗುರುವಾರ, ಪುರಸಭೆಯ 25 ಲಕ್ಷ ರೂ. ಅನುದಾನದಡಿ ಹೈಟೆಕ್ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಭದ್ರಾ ಜಲಾಶಯದಲ್ಲಿ 166 ಅಡಿ ನೀರು ಸಂಗ್ರಹವಾಗಿದೆ. ಆದರೂ ರೈತರ ಹಿತದೃಷ್ಟಿಯಿಂದ ಗುರುವಾರದಿಂದ ನೀರು ಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭದ್ರಾ ಎಡನಾಲೆ ಮತ್ತು ಮೇಲ್ದಂಡೆಗಳಲ್ಲೂ ನೀರು ಹರಿಸಲಾಗುವುದು ಎಂದು ತಿಳಿಸಿದರು.

ನಗರದ ದೇವನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯ ಹೈಟೆಕ್ ಶೌಚಗೃಹವನ್ನು ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರ ನೀಡಿದ್ದ 5 ಭರವಸೆಗಳಲ್ಲಿ 4 ಅನ್ನು ಈಡೇರಿಸಿದ್ದೇವೆ. ನ. 20ರಂದು ಐದನೇ ಭರವಸೆ ಈಡೇರಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಕೆಲ ಜನಪ್ರತಿನಿಧಿಗಳ ಅಪಸ್ವರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಸಚಿವರು, ಶಾಸಕರ ಸಭೆ ಕರೆದು ಅವರ ಸಮಸ್ಯೆ ಆಲಿಸುವ ಮೂಲಕ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಸ್ತೆ, ಚರಂಡಿ, ಶಾಲಾ ಕೊಠಡಿಗಳ ರಿಪೇರಿ, ಶೌಚಗೃಹ ಸೇರಿ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.

ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಸದಸ್ಯರಾದ ಬಾವಿಮನೆ ರಾಜಣ್ಣ, ಮೈಲಪ್ಪ, ರಾಜೇಂದ್ರ, ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ಇಂಜಿನಿಯರ್ ದೇವರಾಜ್, ಕಂದಾಯಾಧಿಕಾರಿ ವಸಂತ್‌ಕುಮಾರ್, ಗುತ್ತಿಗೆದಾರ ಉಜ್ವಲ್, ಮುಖ್ಯಶಿಕ್ಷಕ ಡಿ.ಜಿ. ರಂಗನಾಥ್, ದೊಡ್ಡಪ್ಪ, ರವಿಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net