

ಲಕ್ಷ್ಮೇಶ್ವರ: ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ವಿಶ್ವಮಾನವ ಸಂದೇಶ ಸಾರಿದ ಮಹಾನ್‌ಯೋಗಿ, ಪರಮ ತಪಸ್ವಿ ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಸೆ.13ರಂದು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಗೆ ಭೂಮಿಪೂಜೆ ನೆರವೇರಲಿದೆ.
ಈ ಮಹೋನ್ನತ ಕಾರ್ಯ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದೊಂದಿಗೆ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು ಮತ್ತು ಮುಕ್ತಿಮಂದಿರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರ ನೇತೃತ್ವದಲ್ಲಿ ನೆರವೇರಲಿದೆ. ನಾಡಿನ ಹರಗುರು ಚರಮೂರ್ತಿಗಳು, ಸಚಿವರು, ಶಾಸಕರು, ಗಣ್ಯಮಾನ್ಯರು ಸೇರಿ 10 ಸಾವಿರಕ್ಕೂ ಹೆಚ್ಚು ಭಕ್ತಸಮೂಹ ಸಾಕ್ಷಿಯಾಗಲಿದೆ.
ತಪೋಭೂಮಿ ಮುಕ್ತಿಮಂದಿರ: ಮುಕ್ತಿಮಂದಿರದಲ್ಲಿ ಬುದ್ಧ, ಬಸವ, ಶಂಕರಾಚಾರ್ಯರು, ಗುರುನಾನಕ್, ಯೇಸುಕ್ರಿಸ್ತ, ಪೈಗಂಬರ್ ಹೀಗೆ ಸರ್ವಧರ್ಮ ಸಂಸ್ಥಾಪಕರ ಮೂರ್ತಿ ಪ್ರತಿಷ್ಠಾಪಿಸಿ ಧರ್ಮಸಮನ್ವಯ ಸಾಕ್ಷೀಕರಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಅಂದೇ ನಾಡಿನ ಶ್ರೀಮಂತ ವ್ಯಕ್ತಿಯಿಂದಲೇ ಆ ಕಾರ್ಯ ಮಾಡಿಮುಗಿಸುತ್ತಿದ್ದರು. ಆದರೆ ಭಕ್ತರ ಸಹಕಾರದಿಂದ ಈ ಪೂರ್ಣಗೊಳ್ಳಬೇಕೆಂಬುದು ಶ್ರೀಗಳ ಆಸೆಯಾಗಿತ್ತು. ಶ್ರೀ ಕ್ಷೇತ್ರದಲ್ಲಿ ಜಪ-ತಪಗಳ ಮುಖಾಂತರ ಭೂ-ಕೈಲಾಸವನ್ನೇ ಸೃಷ್ಟಿಸಿರುವ ಲಿಂ. ಗಂಗಾಧರ ಶ್ರೀಗಳವರು ಲಿಂಗೈಕ್ಯರಾದ ಬಳಿಕ ನನೆಗುದಿಗೆ ಬಿದ್ದ ಸಂಕಲ್ಪವನ್ನು ಸಿದ್ಧಿಗೊಳಿಸುವ ಕಾರ್ಯ ರಂಭಾಪುರಿ, ಕಲಾದಗಿ, ಮುಕ್ತಿಮಂದಿರ, ನೊಣವಿಕೆರೆ ಶ್ರೀಗಳ ಇಚ್ಛಾಶಕ್ತಿಯಿಂದ ಸಾಕಾರಗೊಳ್ಳುತ್ತಿದೆ.
ಲಿಂ. ಶ್ರೀಗಳ ತಪೋಬಲ, ದೈವೀಶಕ್ತಿ, ಪವಾಡ, ಮಹಿಮೆಗೆ ಮೆಚ್ಚಿ ಮಹಾನ್ ನಾಯಕರು ಶ್ರೀಗಳ ದರ್ಶನಾಶೀವಾದಕ್ಕೆ ಬರುತ್ತಿದ್ದರು. 1942ರಲ್ಲಿ ಸರ್ವಧರ್ವಗಳ ಸ್ಥಾಪನಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ, ವೀರಶೈವ ಗುರುವರ್ಗದ ಸಮಾವೇಶ, 108 ತೇರು, 1008 ಮಂಟಪ ಪೂಜೆ, ಸೋಮಸಾಗರ ನಿರ್ಮಾಣ, ಸೋಮೇಶ್ವರ ದೇವಸ್ಥಾನಕ್ಕೆ ಕಳಸಾರೋಹಣ, ಪ್ರವಚನ, ದಸರಾ ದರ್ಬಾರ್, ಪಂಚಪೀಠಾಧೀಶ್ವರರ ಸಮಾಗಮದೊಂದಿಗೆ ಧರ್ಮಜಾಗೃತಿಯ ಮೂಲಕ ನಾಡಿನ ಭಕ್ತ ಸಂಕುಲದ ನಡೆದಾಡುವ ದೇವರೇ ಆಗಿದ್ದರು. ಮುಕ್ತಿಮಂದಿರ ಧರ್ಮಕ್ಷೇತ್ರವು ಮುಂದೊಂದು ದಿನ ಪ್ರಸಿದ್ಧಿ ಪಡೆಯಲಿದೆ ಎಂಬ ಶ್ರೀಗುರು ಗೋವಿಂದಭಟ್ಟರ ಮತ್ತು ಶಿಶುನಾಳ ಶರೀಫರ ನುಡಿಗಳು ಇಂದು ನಿಜವಾಗುತ್ತಿವೆ.
ತ್ರಿಕೋಟಿ ಶಿವಲಿಂಗ ಪರಿಕಲ್ಪನೆ: 2.5 ಅಡಿ ಎತ್ತರದ ಶಿವಲಿಂಗದಲ್ಲಿ 6,000 ಗರ್ಭಲಿಂಗಗಳಿರುವಂತಹ 5,000 ಶಿವಲಿಂಗಗಳು ಸೇರಿದಾಗ ತ್ರಿಕೋಟಿಲಿಂಗವಾಗುತ್ತವೆ. ಇಂತಹ 5,000 ಶಿವಲಿಂಗಗಳು ಪ್ರತಿಷ್ಠಾಪನೆಗೊಂಡು, ಅವುಗಳ ನಡುವೆ ಲಿಂ.ಜಗದ್ಗುರುಗಳ, ರೇಣುಕಾಚಾರ್ಯರ ಮತ್ತು ಬೃಹತ್ ಶಿವಲಿಂಗದ ಮೂರ್ತಿಯನ್ನೊಳಗೊಂಡ ಮಂದಿರ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ 5 ಸಾವಿರ ಶಿವಲಿಂಗ, ಲಿಂ.ವೀರಗಂಗಾಧರ ಜಗದ್ಗುರುಗಳು, ಬೃಹತ್ ಶಿವಲಿಂಗ, ಬಸವಣ್ಣ, ನಾಗಮೂರ್ತಿ ಮೂರ್ತಿ ಶ್ರೀ ಕ್ಷೇತ್ರದಲ್ಲಿ ನೆಲೆನಿಂತಿವೆ. ಪುಣ್ಯಭೂಮಿಯಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾದರೆ ಶ್ರೀ ಕ್ಷೇತ್ರ ಕಾಶಿಯಷ್ಟೇ ಪವಿತ್ರವಾಗಲಿದೆ.
1 ಶಿವಲಿಂಗ ಸೇವೆಗೆ 7,001ರೂ. ನಿಗದಿಪಡಿಸಲಾಗಿದ್ದು, ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಪುಣ್ಯಕಾರ್ಯಕ್ಕಾಗಿ ಧರ್ಮಾಭಿಮಾನಿಗಳು, ಭಕ್ತರು, ದಾನಿಗಳು ಕೈಜೋಡಿಸಬೇಕು. ಪರಮ ತಪಸ್ವಿ ಲಿಂ.ವೀರಗಂಗಾಧರ ಜಗದ್ಗುರುಗಳು ಲೋಕ ಕಲ್ಯಾಣಕ್ಕಾಗಿ ಮುಕ್ತಿಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಗೆ ಮಾಡಿದ್ದ ಸತ್ಯಸಂಕಲ್ಪ ಈಡೇರುವ ಕಾಲಕೂಡಿಬಂದಿದೆ. ಈ ಮಹೋನ್ನತ ಕಾರ್ಯ ಸಾಕಾರಗೊಳ್ಳಲು ನಾಡಿನ ಭಕ್ತರ ಸಹಕಾರ, ಸಹಾಯ ಕಾರಣ. ಶಿವಲಿಂಗ ಪ್ರತಿಷ್ಠಾಪನೆ ಪೂರ್ಣಗೊಂಡ ಬಳಿಕ ಇದೊಂದು ಪ್ರಸಿದ್ಧ ಕ್ಷೇತ್ರವಾಗಲಿದೆ. ನಿತ್ಯ ತ್ರಿವಿಧ ದಾಸೋಹದಿಂದ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸಲಿದೆ. ಬುಧವಾರದ ಭೂಮಿಪೂಜೆ ಕಾರ್ಯಕ್ರಮಕ್ಕೆ ಜಾತಿ, ಧರ್ಮ, ರಾಜಕೀಯ, ಪಕ್ಷ ಮರೆತು ಎಲ್ಲರೂ ಪಾಲ್ಗೊಳ್ಳಬೇಕು.-ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹಾಗೂ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು.